

ಬೀದರ್: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ 9ನೇ ರ್ಯಾಂಕ್ ಗಳಿಸಿ ಸಾಧನೆಗೈದ ಕಾರ್ತಿಕ ರೆಡ್ಡಿ ಅವರನ್ನು ಫ್ರೆಂಡ್ಸ್ ಕ್ಲಬ್ ವತಿಯಿಂದ ನಗರದ ಐಎಂಎ ಹಾಲ್‍ನಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಕಾರ್ತಿಕ ರೆಡ್ಡಿ ನೀಟ್‍ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 9ನೇ ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ನುಡಿದರು.
ಜಿಲ್ಲೆಯ ವಿದ್ಯಾರ್ಥಿಗಳು ನೀಟ್ ಹಾಗೂ ಸಿಇಟಿಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆಯುತ್ತಿರುವುದು ಜಿಲ್ಲೆ ಶೈಕ್ಷಣಿಕವಾಗಿ ತೀವ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವುದರ ಸಂಕೇತವಾಗಿದೆ ಎಂದು ಹೇಳಿದರು.
ಜಿಲ್ಲೆಯ ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗ, ಎನ್‍ಡಿಎ, ಕೆಪಿಸಿಎಸ್‍ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಅವರಿಗೆ ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನದ ಅಗತ್ಯ ಇದೆ ಎಂದು ತಿಳಿಸಿದರು.
ವಿದ್ಯಾರ್ಥಿಯ ತಂದೆ, ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ರಾಮರೆಡ್ಡಿ, ತಾಯಿ ಕಲ್ಪನಾ, ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಶಿವಶಂಕರ ಕಾಮಶೆಟ್ಟಿ, ಸಂಜಯ್ ಪಾಟೀಲ, ಅನೂಪ್ ಅಲಿಯಾ, ಆನಂದ ಪೊಬ್ಬಾ, ಶರಣಪ್ಪ ದೇಶಮುಖ, ರವಿ ಮೂಲಗೆ, ಗುರುರಾಜ, ಸುರೇಶ ಬಿರಾದಾರ, ಡಾ. ಪೆಂಟಾರೆಡ್ಡಿ, ರಾಜೇಶ ಕುಲಕರ್ಣಿ, ಅನಿಲ್ ಪಾಟೀಲ, ರಾಹುಲ್ ಪಾಟೀಲ, ನೀಲಶೆಟ್ಟಿ ಇದ್ದರು.