

ಬೀದರ್: ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ ನಗರದ ಶರಣಬಸವೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನೀಟ್ನಲ್ಲಿ ಉತ್ತಮ ಫಲಿತಾಂಶ ಪಡೆದ ಸುದರ್ಶನ ಶೇಷರಾವ (613 ಅಂಕ) ಮತ್ತು ಸೈಯದ್ ಅಜ್ಮತ್ ಅಲಿ (563 ಅಂಕ) ಅವರನ್ನು ಕಲಬುರಗಿಯಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಡಾ.ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ ಸನ್ಮಾನಿಸಿದರು. ಸಾಧಕ ವಿದ್ಯಾರ್ಥಿಗೆ 21 ಸಾವಿರ ನಗದು ಬಹುಮಾನ ನೀಡಿ ಪೂಜ್ಯರು ಆಶೀರ್ವದಿಸಿದರು.
ಗಡಿ ಜಿಲ್ಲೆ ಬೀದರ್ ವಿದ್ಯಾರ್ಥಿಗಳು ಬುದ್ಧಿವಂತರಿದ್ದು, ಉತ್ತಮವಾದ ಸಲಹೆ, ಮಾರ್ಗದರ್ಶನ ನೀಡಿ ರಾಷ್ಟ್ರಕ್ಕೆ ಮಾದರಿಯಾಗುವಂಥ ವೇದಿಕೆ ಕಲ್ಪಿಸಬೇಕಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಿ ಉಜ್ವಲ ಭವಿಷ್ಯ ಕಲ್ಪಿಸಲಾಗುತ್ತಿದೆ ಎಂದು ಶ್ರೀಗಳು ಹೇಳಿದರು. ಕಾಲೇಜಿನ ಪ್ರಾಚಾರ್ಯ ಡಾ.ಸತೀಶ ಪ್ರತಾಪುರೆ, ಉಪನ್ಯಾಸಕರು, ಸಿಬ್ಬಂದಿ ಇದ್ದರು.