

ಚಿತ್ರದುರ್ಗ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಸಿಎಸ್‌ಐಆರ್ ಯುಜಿಸಿ ನೆಟ್ ಹಾಗೂ ನೀಟ್ ಪರೀಕ್ಷೆಗಳಲ್ಲಿ ಅಕ್ರಮ ಎಸಗಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಎಬಿವಿಪಿ ಕಾರ‌್ಯಕರ್ತರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರಾಧ್ಯಾಪಕರ ನೇಮಕ, ಕಿರಿಯ ಸಂಶೋಧಕರು, ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಸಿರುವ ಪರೀಕ್ಷೆಗಳಿಗೆ ಹಾಜರಾಗಿದ್ದ 33 ಲಕ್ಷಕ್ಕೂ ಅಧಿಕ ಅಭ್ಯರ್ಥಿ, ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೆ ಸಿಲುಕದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರೀಕ್ಷೆಗಳಲ್ಲಿ ಅಕ್ರಮವಾಗಿದೆ ಎಂದು ಒಪ್ಪಿರುವ ಕೇಂದ್ರ ಸರ್ಕಾರ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದರೂ, ಇದಕ್ಕೆ ಕಾರಣರಾಗಿರುವ ಆರೋಪಿತರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಲು ಈವರೆಗೂ ಸಾಧ್ಯವಾಗಿಲ್ಲದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರೀಕ್ಷೆಯಲ್ಲಿ ಆಗಿರುವ ಅಕ್ರಮಗಳಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಕಾರ್ಯಕ್ಷಮತೆ ಹಾಗೂ ನಂಬಿಕೆ ಮೇಲೆ ಬಲವಾದ ಪೆಟ್ಟು ಬಿದ್ದಿದೆ. ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಿಗೆ ತಯರಾಗಲು ವಿದ್ಯಾರ್ಥಿಗಳು ಸಮಯ ಹಾಗೂ ಹಣವನ್ನು ವ್ಯಯಿಸಿರುತ್ತಾರೆ. ಈಗ ನಡೆದಿರುವ ಅಕ್ರಮಗಳಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ಅಳಲು ತೋಡಿಕೊಂಡರು.
ಪಿ.ಎಚ್‌ಡಿ ಪ್ರವೇಶ ಬಯಸಿದ್ದ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳ ತ್ರಿಶಂಕು ಸ್ಥಿತಿ ಹಾಗೂ ಆತಂಕಗಳನ್ನು ನಿವಾರಿಸಿ ನ್ಯಾಯ ಕಲ್ಪಿಸಬೇಕು. ಮುಂದೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಲೋಪಗಳಾಗದಂತೆ ಪಾರದರ್ಶಕವಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ರೀತಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಬಿವಿಪಿ ರಾಜ್ಯ ಕಾರ್ಯಕರಿಣಿ ಸದಸ್ಯ ಕನಕರಾಜ್, ಜಿಲ್ಲಾ ಸಂಚಾಲಕ ಸಿದ್ದೇಶ್, ನಗರ ಕಾರ್ಯದರ್ಶಿ ಆರ್.ಗೋಪಿ, ಮಹಿಳಾ ವಿದ್ಯಾರ್ಥಿ ಪ್ರಮುಖ್ ಚೈತ್ರಾ, ಚಿತ್ರಸ್ವಾಮಿ, ಜಗದೀಶ್, ಸಂಜು, ಕಾರ್ತಿಕ್ ಮತ್ತಿತರರು ಇದ್ದರು.