ನೀಟ್ ನಲ್ಲಿ ಕಾರ್ಮಿಕನ ಪುತ್ರ ಸಾಧನೆ

shaheen
Published on

ಬೀದರ್: ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಉಚಿತ ಶಿಕ್ಷಣದ ಸದ್ಬಳಕೆ ಮಾಡಿಕೊಂಡ ಪೆಟ್ರೋಲ್ ಬಂಕ್ ಕಾರ್ಮಿಕರೊಬ್ಬರ ಪುತ್ರ ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ (ನೀಟ್) ಪರೀಕ್ಷೆಯಲ್ಲಿ ಸಾಧನೆಗೈದು ಗಮನ ಸೆಳೆದಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗೂಡೂರು ಗ್ರಾಮದ ಮಹ್ಮದ್ ಮೆಹರಾಜ್ ಸೋಫಿಸಾಬ್ ಅಂಗಡಿ ಬಡತನದಲ್ಲಿ ಅರಳಿದ ಪ್ರತಿಭೆ. ಮೆಹರಾಜ್ ಅಂಗಡಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 97.12 ರಷ್ಟು ಅಂಕ ಪಡೆದಿದ್ದರು. ಕುಟುಂಬದ ಆರ್ಥಿಕ ಸಮಸ್ಯೆ ಹಾಗೂ ಓದುವ ಹಂಬಲ ಕಂಡು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರು ವಿದ್ಯಾರ್ಥಿಗೆ ಶಾಹೀನ್ ಕಾಲೇಜಿನಲ್ಲಿ ಎರಡು ವರ್ಷ ಊಟ, ವಸತಿ ಸಹಿತ ಉಚಿತ ಶಿಕ್ಷಣ ಕಲ್ಪಿಸಿದ್ದರು. ಕಷ್ಟಪಟ್ಟು ವ್ಯಾಸಂಗ ಮಾಡಿದ ಮೆಹರಾಜ್ ಇದೀಗ ವೈದ್ಯಕೀಯ ಕೋಸ್೯ ಕದ ತಟ್ಟಿದ್ದಾರೆ.

ನೀಟ್ ನಲ್ಲಿ 720 ಅಂಕಗಳ ಪೈಕಿ 568 ಅಂಕ (ಆಲ್ ಇಂಡಿಯಾ ರ್ಯಾಂಕ್ 37,745, ಕೆಟೆಗರಿ ರ್ಯಾಂಕ್ 16,659) ಪಡೆದಿರುವ ಅವರಿಗೆ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ದೊರೆಯುವುದು ಬಹುತೇಕ ಖಚಿತವಾಗಿದೆ.

ಶಾಹೀನ್ ಕಾಲೇಜಿನಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ನೀಟ್ ಸಾಧಕ ಮೆಹರಾಜ್ ಅಂಗಡಿ, ಪಾಲಕರು ಮತ್ತು ಶಿಕ್ಷಕರ ಮಾರ್ಗದರ್ಶನ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷರ ನೆರವಿನಿಂದಾಗಿ ನೀಟ್ ನಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಮೆಹರಾಜ್ ತಂದೆ ಸೋಫಿಸಾಬ್ ಮಾತನಾಡಿ, ನನಗೆ ಮೂವರು ಮಕ್ಕಳು. ಹಿರಿಯ ಪುತ್ರ ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ಕೋಸ್೯ ಅಧ್ಯಯನ ಮಾಡುತ್ತಿದ್ದಾನೆ. ಎರಡನೇ ಮಗ ಮೆಹರಾಜ್ ಈಗ ನೀಟ್ ನಲ್ಲಿ ಸಾಧನೆ ಮಾಡಿದ್ದಾನೆ. ಮಗಳು ಶಾಹೀನ್ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದಾಳೆ ಎಂದರು.

ಶಾಹೀನ್ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ಛಲವಿದ್ದರೆ ಏನು ಬೇಕಾದರೂ ಸಾಸಬಹುದು ಎನ್ನುವುದಕ್ಕೆ ಮೆಹರಾಜ್ ನಿದರ್ಶನ. ಶಾಹೀನ್ ಮಾನವೀಯ ನೆಲೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು, ಪ್ರೋತ್ಸಾಹ ನೀಡುತ್ತ ಬಂದಿದೆ. ಸಂಸ್ಥೆಯ ನೆರವು ಬಳಸಿಕೊಂಡು ಸಾಧನೆ ಮಾಡಿರುವ ಮೆಹರಾಜ್ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net