

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ : ನಗರಸಭೆಯಲ್ಲಿ ಖಾತೆ, ಕಟ್ಟಡ ನಿರ್ಮಾಣ ಪರವಾನಗಿ ಪಡೆಯಬೇಕೆಂಬುದು ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ಹರಸಾಹಸದ ಕೆಲಸವಾಗಿದೆ. ನಿಯಮಾನುಸಾರ ಖಾತೆ ಸೇರಿ ಅಗತ್ಯ ದಾಖಲೆಗಳಿಗಾಗಿ ಕಚೇರಿಗೆ ಹೋಗುವ ಜನರು ಹಲವು ಬಾರಿ ಸುತ್ತಾಡಿ ಸುಸ್ತಾಗಬೇಕು. ಅಧಿಕಾರಿಗಳು ತಾಂತ್ರಿಕ ದೋಷದ ನೆಪ ಹೇಳುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಕೊನೆಗೆ ಮಧ್ಯವರ್ತಿಗಳ ಮೂಲಕ ಕೆಲಸವಾಗುವಷ್ಟರಲ್ಲಿ ಜನರು ಹೈರಾಣಾಗಿ, ಮತ್ತೊಂದು ಬಾರಿ ಕಚೇರಿ ಮೆಟ್ಟಿಲೇರುವುದು ಬೇಡ ಎಂಬ ರಾಗ ಎಳೆಯುತ್ತಾರೆ.
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಮೊದಲಿನಿಂದಲೂ ಉತ್ತಮ ಸೇವೆ ಸಿಗುವಿಕೆಯು ತುಂಬಾ ಕಷ್ಟ ಎನ್ನುವುದು ಬಹುತೇಕರ ಮಾತು. ಇದರಲ್ಲಿ ಖಾತೆ, ಕಟ್ಟಡ ನಿರ್ಮಾಣ ಪರವಾನಗಿ ದಾಖಲೆಯು ತಿಂಗಳಾನುಗಟ್ಟಲೇ ಸಿಗುವುದಿಲ್ಲ. ಸರ್ಕಾರಿ ನಿಯಮಗಳಿಗಿಂತಲೂ ಸಿಬ್ಬಂದಿ ಹೇಳುವ ಕೆಲ ನಿಯಮಗಳಿಂದಲೇ ತಾಂತ್ರಿಕ ದೋಷ ಉಂಟಾಗಿ ಕೆಲಸಗಳಾಗುವುದಿಲ್ಲ.
ಇ-ಖಾತೆ ತಲೆ ನೋವು: ಈಗ ಕಡ್ಡಾಯವಾಗಿ ನಿವೇಶನ ಮತ್ತು ಕಟ್ಟಡಗಳಿಗೆ ಇ-ಖಾತೆ ಹೊಂದಿರಬೇಕು. ಆದರೆ, ಇದನ್ನು ನೀಡುವಲ್ಲಿ ಇಲ್ಲಿನ ನಗರಸಭೆಯು ಆಮೆ ನಡೆಗಿಂತಲೂ ನಿಧಾನಗತಿಯ ತತ್ವವನ್ನು ಅನುಸರಿಸುತ್ತಿದೆ. ಜಿಲ್ಲೆಯ ಉಳಿದ ಸ್ಥಳೀಯ ಆಡಳಿತ ಸಂಸ್ಥೆಯ ವ್ಯಾಪ್ತಿಯಲ್ಲಿ ತ್ವರಿತ ವಿತರಣೆ ವ್ಯವಸ್ಥೆ ಇದೆ. ಗೌರಿಬಿದನೂರಿನಲ್ಲಿ ಮನೆಗೆ ಹೋಗಿ ಲಾನುಭವಿಗಳಿಗೆ ವಿತರಣೆಯ ಅಭಿಯಾನ ಕೈಗೊಳ್ಳಲಾಗಿದೆ. ಆದರೆ, ಇಲ್ಲಿ ಮಾತ್ರ ಪೌರಾಡಳಿತ ನಿರ್ದೇಶನಾಲಯದ ನಿಯಮದ ಅಡ್ಡಿ ನೆಪ ಹೇಳಲಾಗುತ್ತಿದೆ. ನಿಯಮಾನುಸಾರ ನಿವೇಶನಗಳಿಗೆ ಯಾವುದೇ ಅಡ್ಡಿ ಇಲ್ಲದೇ ಇ-ಖಾತೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆಯಾದರೂ ವಾಸ್ತವವೇ ಬೇರೆ. ಹಲವು ವರ್ಷಗಳಿಂದಲೂ ಇಲ್ಲಿ ಠಿಕಾಣಿ ಹೂಡಿರುವ ಕೆಲ ಸಿಬ್ಬಂದಿ ಹಣ ಕೊಟ್ಟವರಿಗೆ ಮಾತ್ರ ದಯಪಾಲಿಸುತ್ತಿದ್ದಾರೆ. ನೀಡದವರನ್ನು ಸತಾಯಿಸುತ್ತಿದ್ದಾರೆ. ಇನ್ನು ಅನೇಕರು ನಗರಸಭೆ ಸದಸ್ಯರು, ಪ್ರಭಾವಿ ನಾಯಕರು ಶಿಾರಸ್ಸಿನ ಮೊರೆ ಹೋದರೂ ಪ್ರಯೋಜನವಾಗುತ್ತಿಲ್ಲ. ಮತ್ತೊಂದೆಡೆ ಇ-ಖಾತೆ ಇಲ್ಲದೇ ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲ. ಜತೆಗೆ ನಿಯಮಾನುಸಾರ ನಿವೇಶನಗಳನ್ನು ಮಾರಲು ಸಾಧ್ಯವಾಗುತ್ತಿಲ್ಲ. ಇದು ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿ ಸಭೆಯಲ್ಲೂ ಗದ್ದಲ: ಪ್ರತಿ ಸಾಮಾನ್ಯ ಸಭೆಯಲ್ಲಿ ಮುಖ್ಯವಾಗಿ ಇ-ಖಾತೆ ಗೊಂದಲದ ಗಲಾಟೆಯೇ ಹೆಚ್ಚು. ಸ್ವಯಂ ಸದಸ್ಯರೇ ಬಹಿರಂಗವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮೊದಲಿನಿಂದಲೂ ನಗರಸಭೆಯ ಖಾತಾ ಪುಸ್ತಕದಲ್ಲಿ ನಮೂದು, ಆಸ್ತಿಗೆ ಸಾಮಾನ್ಯ ಖಾತೆ ಹೊಂದಿರುವ ಮತ್ತು ತೆರಿಗೆ ಪಾವತಿಸುತ್ತಿರುವವರಿಗೆ ಇ-ಖಾತೆ ವಿತರಿಸಬೇಕು. ಒಂದು ವೇಳೆ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಮಂಕಾದ ಅಭಿಯಾನ: ಖಾತೆ ವಿತರಣೆಗೆ ಸಂಬಂಧಿಸಿದಂತೆ ಅವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿ ಇಲ್ಲಿನ ನಗರಸಭೆ ಸದಸ್ಯೆ ವಿ.ನೇತ್ರಾವತಿ, ಜಿಲ್ಲಾಡಳಿತದ ಜತೆಗೆ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಗಮನ ಸೆಳೆದಿದ್ದರು. ಇದಕ್ಕೆ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳು ನಗರಸಭೆಗೆ ಸೂಚಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಖಾತಾ ಆಂದೋಲನ ಕೈಗೊಳ್ಳಲಾಯಿತು. ಆದರೆ, ಇದು ಒಂದು ದಿನಕ್ಕೆ ಮಂಕಾಯಿತು.
ನಗರಸಭೆಯಲ್ಲಿನ ಖಾತೆಗಳ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಗಮನಕ್ಕೂ ತಂದರೂ ಸ್ಪಂದನೆ ಸಿಕ್ಕಿಲ್ಲ. ಇದಕ್ಕೆ ಪೌರಾಡಳಿತ ಸಚಿವರು ಮತ್ತು ಚಿಕ್ಕಬಳ್ಳಾಪುರ ನಗರಸಭೆ ವಿರುದ್ಧ ಏಕಾಂಗಿ ಪ್ರತಿಭಟನೆ ನಡೆಸಲಾಗುವುದು. ಎ.ಗಜೇಂದ್ರ, ನಗರಸಭೆ ಸದಸ್ಯ ******* ಇಲ್ಲಿ ಮೊದಲಿನಿಂದಲೂ ಖಾತೆ ಸಮಸ್ಯೆ ಇದೆ. ಅನುಮೋದನೆ ಪಡೆಯದ ನಿವೇಶನಗಳ ಖಾತೆಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆಯ ಪರಿಹಾರವು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು. ಉಳಿದಂತೆ ನಗರಸಭೆ ಖಾತೆ ಪುಸ್ತಕದಲ್ಲಿನ ಮಾಹಿತಿ, ಲಿಖಿತ ಖಾತೆ ದಾಖಲೆ ಹೊಂದಿರುವವರಿಗೆ ಇ-ಖಾತೆ ನೀಡಲಾಗುತ್ತಿದೆ. ಮಹಾಂತೇಶ್, ಪೌರಾಯುಕ್ತ, ಚಿಕ್ಕಬಳ್ಳಾಪುರ