

ಬಳ್ಳಾರಿ : ಸರ್ಕಾರ ಮಾತ್ರವಲ್ಲದೆ ನಿಸ್ವಾರ್ಥ ಸೇವೆಯಿಂದ ಪ್ರತಿಯೊಬ್ಬರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.
ನಗರದ ವಿಎಸ್‌ಕೆ ವಿವಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಶೈಕ್ಷಣಿಕ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯೂ ಶೇ. 10 ರಷ್ಟು ಹಣ ಮೀಸಲಿಡಬೇಕು. ಪ್ರಾಧ್ಯಾಪಕರು ಶೈಕ್ಷಣಿಕ ಅಭಿವೃದ್ಧಿಗೆ ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ವಿಎಸ್‌ಕೆ ವಿವಿ ಕುಲಸಚಿವ ಎಸ್. ಎನ್. ರುದ್ರೇಶ ಮಾತನಾಡಿ, ವಿಶಿಷ್ಟವಾದ ಸಾಂಸ್ಕ್ರತಿಕ ನೆಲೆಗಟ್ಟುಗಳನ್ನು ನೀಡಿದಂತಹ ಮಹಾನ ವ್ಯಕ್ತಿಗಳ ನಾಡು ನಮ್ಮದು. ಕರ್ನಾಟಕವನ್ನು ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ ಅಭಿವೃದ್ದಿಗೆ ಒತ್ತು ನೀಡಲಾಯಿತು. ಎಲ್ಲರೂ ಜಾತಿ, ಧರ್ಮ ಮೀರಿ ಒಗ್ಗಟ್ಟಾಗಿ ಶ್ರಮಿಸಿದಾಗ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸದಸ್ಯ ಡಾ. ರಾಜೇಂದ್ರ ಪ್ರಸಾದ, ವಿವಿಯ ಆಂಗ್ಲ ಮತ್ತು ನಾಟಕ ವಿಭಾಗದ ಪ್ರೊ. ಶಾಂತನಾಯ್ಕ, ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು ಸಿ. ಡಿ. ಸಿ. ನಿರ್ದೇಶಕ ಡಾ. ಎಚ್. ತಿಪ್ಪೇಸ್ವಾಮಿ ಮಾತನಾಡಿದರು.