ನಿಸ್ವಾರ್ಥ ಸೇವೆಯಿಂದ ಭಕ್ತಿಯ ಸಾಕ್ಷಾತ್ಕಾರ, ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

27CBP2
Published on

ಚಿಕ್ಕಬಳ್ಳಾಪುರ: ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಗುಣಮಟ್ಟದ ಉಚಿತ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆ ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಿರ್ಮಿಸಿರುವ ಶ್ರೀ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಲೋಕಾರ್ಪಣೆ ಮಾಡಿದರು.

ಭಗವಂತ ಕಣ್ಣಿಗೆ ಕಾಣುವುದಿಲ್ಲ. ಆದರೆ, ಸತ್ಯಸಾಯಿಬಾಬಾರ ಸಂದೇಶದಂತೆ ಮುದ್ದೇನಹಳ್ಳಿಯಲ್ಲಿ ನಿಸ್ವಾರ್ಥ ಪ್ರೀತಿ ಮತ್ತು ಸೇವೆಯಲ್ಲಿ ದೈವಭಕ್ತಿಯ ಸಾಕ್ಷಾತ್ಕಾರವಾಗುತ್ತಿದೆ. ಇಲ್ಲಿ ಮಾನವ ಸೇವೆ ಮಾಧವ ಸೇವೆ ಎಂಬ ತತ್ವದೊಂದಿಗೆ ಸೇವಾ ಚಟುವಟಿಕೆ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ತೇತ್ರಾಯುಗ, ದ್ವಾಪರಯುಗದಲ್ಲಿ ಆತ್ಮ ಮತ್ತು ಪರಮಾತ್ಮ ಒಂದಾದ ದೈವತ್ವದಿಂದ ಜನರ ಕಲ್ಯಾಣವಾಯಿತು. ಹಾಗೆಯೇ ದೈವತ್ವವನ್ನು ಸಾರಲು ಏಸು ಮತ್ತು ಮಹಮದ್ ಪೈಗಂಬರ್ ಸಂದೇಶಾತ್ಮಕವಾಗಿ ಬಂದರು. ಇದೇ ಮಾದರಿಯಲ್ಲಿ ಸತ್ಯಸಾಯಿ ಬಾಬಾ ಸೇವೆ ಮತ್ತು ಪ್ರೀತಿಯ ಸಾರವನ್ನು ಸಾರಿದರು. ಇವರ ದರ್ಶನ ಲಭಿಸಿದ್ದು ಪುಣ್ಯ ಎಂದರು.

ಪ್ರಸ್ತುತ ದಿನಗಳಲ್ಲಿ ಆತ್ಮಕ್ಕೆ ಮನುಷ್ಯತ್ವ ಸೇರಿಕೊಂಡಿದೆ. ಇದೇ ಕಾರಣಕ್ಕೆ ಆಸೆ, ಆಕಾಂಕ್ಷೆಗಳು, ದುರಾಸೆ ಹೆಚ್ಚಾಗಿದೆ, ಇದು ದೈವತ್ವದಿಂದ ತೇತ್ರಾಯುಗವಾಗಬೇಕು, ಇಲ್ಲದಿದ್ದಲ್ಲಿ ಮುಂದಿನ ಕಲಿಯುಗದಲ್ಲಿ ಅವ್ಯವಸ್ಥೆಯಿಂದ ಕುವ್ಯವಸ್ಥೆಗೆ ಹೋಗುವ ಸಾಧ್ಯತೆ ಇದೆ ಆತಂಕ ವ್ಯಕ್ತಪಡಿಸಿದರು.

ಉತ್ತಮ ಸಮಾಜ ನಿರ್ಮಾಣಕ್ಕೆ ಸತ್ಪ್ರಜೆಗಳು ಅಗತ್ಯ. ಈ ನಿಟ್ಟಿನಲ್ಲಿ ಶೈಕ್ಷಣಿಕ, ಆರೋಗ್ಯ, ಸಾಂಸ್ಕೃತಿಕ ಸುಧಾರಣೆಯಾಗಬೇಕಿದ್ದು ಸರ್ಕಾರ ಮತ್ತು ಜನರು ಪರಸ್ಪರ ಕೈ ಜೋಡಿಸಿ ಕಾರ್ಯನಿರ್ವಹಿಸಬೇಕು ಎಂದು ಸದ್ಗುರು ಮಧುಸೂದನ್ ಸಾಯಿ ಆಶೀರ್ವಚನ ನೀಡಿದರು.

ಬಾಲಕಿಗೆ ಉಡುಗೋರೆ: ಇತ್ತೀಚೆಗೆ ಸತ್ಯಸಾಯಿ ಸಂಸ್ಥೆಯ ನೂತನ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಾಲಕಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಗೊರೆ ನೀಡಿ, ಶುಭ ಹಾರೈಸಿದರು.

ನೂತನ ಕಟ್ಟಡಕ್ಕೆ ಭೂಮಿ ಪೂಜೆ: ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಆಸ್ಪತ್ರೆಯ ಶ್ರೀ ಸತ್ಯಸಾಯಿ ರಾಜೇಶ್ವರಿ ಬ್ಲಾಕ್‌ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ಸಿಎಂ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದರು.

ತಾಯಿ ಪಾರು, ಮಾಂಸಾಹಾರ ತ್ಯಾಗ: ಹದಗೆಟ್ಟ ಆರೋಗ್ಯ ಸ್ಥಿತಿಯಲ್ಲಿ ನಲುಗುತ್ತಿದ್ದ ತಾಯಿಯ ಸಂಕಷ್ಟ ನೋಡಲಾಗದೆ ಸತ್ಯಸಾಯಿ ಸ್ಮರಣೆ ಮಾಡಿದ ಬಳಿಕ ನೋವು ದೂರವಾದ ಅನುಭವವನ್ನು ಸಿಎಂ ಬಸವರಾಜ ಬೊಮ್ಮಾಯಿ ಹಂಚಿಕೊಂಡರು. 1998ರಲ್ಲಿ ವೈಟ್‌ಫೀಲ್ಡ್‌ನಲ್ಲಿ ಪುಟ್ಟಪರ್ತಿ ಸತ್ಯಸಾಯಿ ಬಾಬಾರ ದರ್ಶನವಾಯಿತು. ಸಸ್ಯಾಹಾರ ಮತ್ತು ಮಾಂಸಾಹಾರ ಸೇವಿಸುವವರ ನಡುವಿನ ಹೋಲಿಕೆಯ ಬಾಬಾ ಅವರ ಆಧ್ಯಾತ್ಮಿಕ ಪುಸ್ತಕವನ್ನು ಓದಿದೆ, ಅಂದಿನಿಂದಲೇ ಮಾಂಸಾಹಾರ ಸೇವನೆ ಕೈಬಿಟ್ಟೆ ಎಂದರು. ತಾಯಿಯ ಆರೋಗ್ಯ ಸುಧಾರಣೆಗೆ ಬಾಬಾರನ್ನು ಸ್ಮರಿಸಿ, ಪೂಜೆ ಮಾಡಿದಾಗ ಸಮಸ್ಯೆ ದೂರವಾಯಿತು. ಇದು ನಿಜಕ್ಕೂ ಪವಾಡವೇ ಎಂದ ಸಿಎಂ, ಸೇವೆಯಲ್ಲಿಯೇ ದೈವಭಕ್ತಿಯನ್ನು ಎಲ್ಲರಿಗೂ ಉಣಬಡಿಸಿದ ಮಹಾನ್ ಪುರುಷರು ಸತ್ಯಸಾಯಿಬಾಬಾ ಎಂದು ಬಣ್ಣಿಸಿದರು.

ರಾಷ್ಟ್ರಗೀತೆ ಗಾಯನಕ್ಕೆ ಕಾದ ಸಭಿಕರು: ವೇದಿಕೆ ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಬಸವರಾಜ ಬೊಮ್ಮಾಯಿಗೆ ಮೊಬೈಲ್ ಕರೆ ಬಂದಿತು. ಇದರಿಂದ ಆತುರಾತುರವಾಗಿ ಮಾತನಾಡಲು ಹೊರಗಡೆ ಹೋದರು. ಇದರಿಂದ ಬ್ಯಾಂಡ್ ತಂಡ ರಾಷ್ಟ್ರಗೀತೆ ಗಾಯನಕ್ಕೆ ಕಾಯಬೇಕಾಯಿತು. ಕೊನೆಗೆ ಸಿಎಂ ಬರುತ್ತಿದ್ದಂತೆ ಶುರು ಮಾಡಿ ತೆರೆ ಎಳೆಯಲಾಯಿತು. ಬಳಿಕವೂ ಮೊಬೈಲ್ ಕರೆಯಲ್ಲಿ ನಿರತರಾಗಿದ್ದ ಬೊಮ್ಮಾಯಿ ಪುರಸ್ಕಾರ ಸ್ವೀಕರಿಸಿ ಅಲ್ಲಿಂದ ತೆರಳಿದರು.

ಸರ್ ಎಂ.ವಿ.ಸ್ಮಾರಕಕ್ಕೆ ಭೇಟಿ ನೀಡಿದ ಸಿಎಂ: ಕಾರ್ಯಕ್ರಮ ಮುಗಿದ ಬಳಿಕ ಬಸವರಾಜ ಬೊಮ್ಮಾಯಿ ಮುದ್ದೇನಹಳ್ಳಿಯಲ್ಲಿರುವ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಸಮಾಧಿ ಮತ್ತು ಸ್ಮಾರಕ ಸ್ಥಳಕ್ಕೆ ನೀಡಬೇಕಾಗಿತ್ತು. ಆದರೆ, ತುರ್ತು ಮೊಬೈಲ್ ಕರೆಯಿಂದ ಭೇಟಿ ನೀಡದೇ ನೇರವಾಗಿ ಬೆಂಗಳೂರು ಕಡೆಗೆ ಪ್ರಯಾಣಿಸಿದರು.

ಸಂಸದ ಬಿ.ಎನ್.ಬಚ್ಚೇಗೌಡ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ, ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ.ಶ್ರೀನಿವಾಸ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net