ನಿಸ್ವಾರ್ಥ ಸಮಾಜ ಸೇವಕರ ಸಂಖ್ಯೆ ಹೆಚ್ಚಲಿ

2 skpp 1
Published on

ಸಕಲೇಶಪುರ: ನಿಸ್ವಾರ್ಥ ಸಮಾಜ ಸೇವಕರ ಸಂಖ್ಯೆ ಹೆಚ್ಚಿದಾಗ ಲೋಕ ಸುಭೀಕ್ಷವಾಗಿ ಬೆಳಗಲಿದೆ ಎಂದು ಅದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಸೋಮವಾರ ಸಮಾಜ ಸೇವಕ ಪ್ರತಾಪ್‌ಗೌಡ ನಿರ್ಮಿಸಿರುವ ಹೋಬಳಿ ಬೆಳೆಗಾರರ ಸಂಘದ ಕಟ್ಟಡ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.


ದುಡಿದ ಹಣದಲ್ಲಿ ಅಲ್ಪ ಹಣವನ್ನು ಸಮಾಜ ಸೇವೆಗಾಗಿ ಪ್ರತಿಯೊಬ್ಬರೂ ಮೀಸಲಿಡಬೇಕು. ಸ್ವಾರ್ಥದ ಬದುಕು ಶ್ವಾನದ ಬದುಕಿಗೆ ಸಮ. ಪ್ರತಾಪ್‌ಗೌಡ ಅವರಂತಹ ಸಂತತಿ ಸಮಾಜದಲ್ಲಿ ಹೆಚ್ಚಿದಾಗ ಲೋಕದಲ್ಲಿನ ಕಷ್ಟಕಾರ್ಪಣ್ಯಗಳು ಕಡಿಮೆಯಾಗಲಿವೆ ಎಂದರು.


ರಾಜ್ಯದಲ್ಲಿ ದೇಶದ ಶೇ.70 ರಷ್ಟು ಕಾಫಿಯನ್ನು ಉತ್ಪಾದಿಸಲಾಗುತ್ತಿದ್ದು, ಕಾಫಿ ಬೆಳೆಗಾರರ ವರ್ಗ ಅತ್ಯಂತ ಸುಶಿಕ್ಷಿತ ವರ್ಗ ಎಂದು ಗುರುತಿಸಿಕೊಂಡಿದೆ. ಕಾಫಿ ಬೆಳೆ ಇಂದು ಉದ್ಯಮವಾಗಿ ಬೆಳೆದಿದ್ದು, ವೈಜ್ಞಾನಿಕವಾಗಿ ಕಾಫಿ ಬೆಳೆಯದಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ. ಕಾಫಿ ಬೆಳೆಗಾರರ ಸಂಕಷ್ಟದ ವಿರುದ್ಧ ಹೋರಾಟಕ್ಕಾಗಿಯೇ ಜಿಲ್ಲೆಯ ಪ್ರತಿಯೊಂದು ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿ ಕಚೇರಿಗಳನ್ನು ತೆರೆದಿರುವುದು ಸಂಘದ ಕ್ರಿಯಾಶೀಲತೆಯನ್ನು ತೋರುತ್ತಿದೆ ಎಂದರು.


ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಚ್.ಪಿ.ಸಂದೇಶ್ ಮಾತನಾಡಿ, ಕಾಫಿ ಬೆಳೆಗಾರರ ಬಗ್ಗೆ ರಾಜ್ಯದಲ್ಲಿ ವಿಶೇಷ ಗೌರವವಿದೆ. ಕಾಫಿ ಬೆಳೆಗಾರರೆಂದರೆ ಶ್ರೀಮಂತರೆಂಬ ಭಾವನೆ ನಾಡಿನೆಲ್ಲೆಡೆ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಫಿ ತೋಟಗಳ ನಿರ್ವಹಣೆ ವೆಚ್ಚ ಏರಿಕೆಯಾಗಿದ್ದು, ಕಾರ್ಮಿಕರ ಅಭಾವ ಸೇರಿದಂತ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದರೂ ಧೃತಿಗೆಡದೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬೆಳೆಗಾರರ ಆತ್ಮಸ್ಥೈರ್ಯವನ್ನು ಮೆಚ್ಚಲೇ ಬೇಕು. ಬೆಳೆಗಾರರ ಸಮಸ್ಯೆ ನಿವಾರಣೆಗಾಗಿ ಹಾಸನ ಜಿಲ್ಲಾ ಬೆಳೆಗಾರರ ಸಂಘ ಹಾಗೂ ಕರ್ನಾಟಕ ಬೆಳೆಗಾರರ ಒಕ್ಕೂಟ ನಿರಂತರ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ಜಿಲ್ಲೆಯ ಎಲ್ಲ ಹೋಬಳಿಗಳಲ್ಲೂ ಸ್ವಂತ ಬೆಳೆಗಾರರ ಸಂಘಗಳು ಅಸ್ತಿತ್ವಕ್ಕೆ ಬಂದರೆ ಹೋರಾಟಕ್ಕೆ ಮತ್ತಷ್ಟು ಬರಲಿದೆ ಎಂದರು.


ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಹೆತ್ತೂರು ಹೋಬಳಿಯಾದ್ಯಂತ ಸಂಕಷ್ಟದಲ್ಲಿರುವವರ ನೆರವಿಗೆ ನಿಂತಿರುವ ಪ್ರತಾಪ್‌ಗೌಡರ ಸಮಾಜ ಸೇವೆ ಶ್ಲಾಘನಾರ್ಹ. ಹೋಬಳಿಯಲ್ಲಿ ಕಾಡಾನೆ ಸಮಸ್ಯೆಯಿಂದ ಬೆಳೆಗಾರರ ಸಂಕಷ್ಟ ಮತ್ತಷ್ಟು ಹೆಚ್ಚಿದ್ದು, ಸಮಸ್ಯೆ ನಿವಾರಣೆಗೆ ನಡೆಸಿದ ಎಲ್ಲ ಯತ್ನಗಳು ವಿಫಲಗೊಂಡಿದೆ. ಹೋಬಳಿ ಜನರ ಸಹನೆ ಮೆಚ್ಚತಕ್ಕದ್ದು ಎಂದರು.


ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಸಚ್ಚಿನ್, ಪ್ರಧಾನ ಕಾರ್ಯದರ್ಶಿ ದೇವರಾಜ್, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಸಮಾಜ ಸೇವಕ ಪ್ರತಾಪ್‌ಗೌಡ, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಟಿ.ಮೋಹನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಎಚ್‌ಡಿಪಿಎ ಅಧ್ಯಕ್ಷ ಸುಬ್ರಮಣ್ಯ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net