'ನಿಸ್ವಾರ್ಥ ದಾನಿಗಳಿಂದ ವಿದ್ಯಾರ್ಥಿನಿಲಯಗಳ ಅಭಿವೃದ್ಧಿ ಸಾಧ್ಯ'

8
Published on

ಮೈಸೂರು:ಸರಸ್ವತಿಪುರಂನಲ್ಲಿರುವ ಬಣಜಿಗ (ಬಲಿಜ) ವಿದ್ಯಾರ್ಥಿ ನಿಲಯದಲ್ಲಿ ನೂತನ ಮಹಿಳಾ ವಿದ್ಯಾರ್ಥಿ ನಿಲಯದ ಸೌಕರ್ಯಕ್ಕಾಗಿ 5 ಲಕ್ಷ ರೂ. ಧನಸಹಾಯ ಮಾಡಿದ ದಾನಿಗಳಾದ ಬೆಂಗಳೂರಿನ ಎಸ್.ಹನುಮಾನ್, ಬಿ. ಶಾರದಾ, ಆರ್. ಪೂರ್ಣಿಮಾ, ವಿ ಸುಂದರಮೂರ್ತಿ ಅವರನ್ನು ಭಾನುವಾರ ಸನ್ಮಾನಿಸಲಾಯಿತು.
ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್ ಮಾತನಾಡಿ, ನಿಸ್ವಾರ್ಥ ದಾನಿಗಳಿಂದ ವಿದ್ಯಾರ್ಥಿನಿಲಯಗಳ ಅಭಿವೃದ್ಧಿ ಸಾಧ್ಯ. ಎಸ್.ಹನುಮಾನ್ ದಂಪತಿ ತಮ್ಮ ಏಕೈಕ ಪುತ್ರ ಡಾ.ಎಚ್.ಸಂದೀಪ್ ಅಗಲಿಕೆಯನ್ನು ಮರೆಯಲು ಬೇರೆ ಮಕ್ಕಳ ವಿದ್ಯಾರ್ಜನೆ, ದೇವಾಲಯಗಳ ನಿರ್ಮಾಣಕ್ಕೆ ನೆರವು ಮಾಡುತ್ತಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ವಿದ್ಯಾರ್ಥಿ ನಿಲಯಗಳು ಆಶ್ರಯ ತಾಣವಾಗಿದೆ. ಬದುಕನ್ನು ರೂಪಿಸಿಕೊಳ್ಳಲು ಸಹಾಯವಾಗುವ ವಿದ್ಯಾರ್ಥಿ ನಿಲಯಗಳಿಗೆ ಸಹಾಯ ಮಾಡಿದರೆ ನೂರಾರು ವರ್ಷಗಳು ದಾನಿಗಳ ಹೆಸರು ಉಳಿಯುತ್ತದೆ. ಜೀವನದ ಸಾರ್ಥಕತೆಗೆ ಒಂದು ಅರ್ಥ ಬರುತ್ತದೆ ಎಂದರು.
ವಿದ್ಯಾ ಕ್ಷೇತ್ರಕ್ಕೆ ಸಹಾಯ ಮಾಡಿದರೆ ವಿದ್ಯಾರ್ಥಿಗಳು ಜೀವನವನ್ನು ರೂಪಿಸಿಕೊಂಡು ದೇಶದ ಪ್ರಗತಿಗೆ ಸಹಕಾರಿ ಆಗಲಿದ್ದಾರೆ. ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರ ಸಹಾಯದಿಂದ ನಗರದಲ್ಲಿ ಎಂ.ಎಸ್. ರಾಮಯ್ಯ ಬಲಿಜ ವಿದ್ಯಾರ್ಥಿನಿಲಯ ಸ್ಥಾಪಿಸಲು ಸಾಧ್ಯವಾಯಿತು. ನೂತನ ವಿದ್ಯಾರ್ಥಿನಿಲಯದಿಂದ ವಿದ್ಯಾರ್ಥಿನಿಯರು ಮೈಸೂರಿನಲ್ಲಿ ಉತ್ತಮ ವಾತಾವರಣದಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಂ. ನಾರಾಯಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ನಿಲಯದಲ್ಲಿ ಬಲಿಜ ವಿದ್ಯಾರ್ಥಿಗಳು ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆದು ತಮ್ಮ ಭವಿಷ್ಯ ಉತ್ತಮಪಡಿಸಿಕೊಂಡಿದ್ದಾರೆ. ಬೆಂಗಳೂರು, ತುಮಕೂರು ಹೊರತಾಗಿ ಮೈಸೂರಿನಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ ಪ್ರಾರಂಭಿಸಲಾಗಿದೆ. ದಾನಿಗಳ ಸಹಕಾರದಿಂದ ಇನ್ನಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ, ಉಪಾಧ್ಯಕ್ಷ ಜಿ.ರಮೇಶ್, ಸಂಘದ ನಿರ್ದೇಶಕರಾದ ಎಚ್.ಕೆ. ಜಗನ್ನಾಥ್, ಡಿ. ನಾಗರಾಜ್, ಡಾ.ಎಸ್. ಕೃಷ್ಣಪ್ಪ, ಬಿ.ಕೆ. ಸುರೇಶ್, ಎಚ್.ವಿ. ನಾಗರಾಜ್, ಪಾರ್ಥಸಾರಥಿ, ಟಿ.ಎಸ್.ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net