ನಿಸರ್ಗ ನಡಿಗೆ-ಕಾಡ ಹಾದಿಯಲ್ಲಿ ಅರಿವಿನ ಪಯಣ

130
Published on

ತುಮಕೂರು: ಶಿರಾ ಸರ್ಕಾರಿ ಪಿಯು ಕಾಲೇಜು ಪ್ರೌಢಶಾಲಾ ವಿಭಾಗದ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್​, ಚಿಗುರು ಯುವಜನ ಸಂಘ ಅಮಲಗೊಂದಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ನಿಸರ್ಗ ನಡಿಗೆ&ಕಾಡ ಹಾದಿಯಲ್ಲಿ ಅರಿವಿನ ಪಯಣ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಭಾಗವಾಗಿ ಶನಿವಾರ ರಂಗನಾಥಪುರ ಅರಣ್ಯ ವಲಯದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ನಾಗರಾಜು ನೇತೃತ್ವದಲ್ಲಿ ವಿದ್ಯಾರ್ಥಿಗಳು ಅರಣ್ಯ ಪ್ರದೇಶ ವೀಕ್ಷಿಸಿದರು.

ನಾಗರಾಜು ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಬಹುವಿಧವಾದ ಸಸ್ಯ ಸಂಪನ್ಮೂಲಗಳು ಇರುತ್ತವೆ. ಅವುಗಳು ಒಂದಕ್ಕೊಂದು ಪೂರಕವಾಗಿ ಬೆಳೆಯುತ್ತಾ ಕಾಡು ಸಮೃದ್ಧಗೊಳಿಸುತ್ತವೆ. ಮಲೆನಾಡಿನ ಕಾಡುಗಳಂತೆ ಬಯಲು ಸೀಮೆಯಲ್ಲಿರುವ ಕುರುಚಲು ಕಾಡುಗಳೂ ಸಹ ಪರಿಸರದಲ್ಲಿನ ವೈವಿಧ್ಯತೆಯನ್ನು ಶ್ರೀಮಂತಗೊಳಿಸುತ್ತಿವೆ. ಹಲವು ವನ್ಯಜಿವಿಗಳು, ಸರೀಸೃಪಗಳು, ಪಕ್ಷಿಗಳು ತಮ್ಮ ಹೊಸ ಸ್ಥಳಕ್ಕಾಗಿ ಈ ಕುರುಚಲು ಕಾಡುಗಳನ್ನು ಅವಲಂಬಿಸಿವೆ ಎಂದರು.

ಬೆಟ್ಟ ಗುಡ್ಡಗಳಲ್ಲಿ ಅತಿ ಹೆಚ್ಚಾಗಿ ಹುಲ್ಲುಗಾವಲು ಆವರಿಸಿರುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಳವಾಗಲು ಸಹಕಾರಿಯಾಗುತ್ತದೆ. ಬೇಸಿಗೆಯಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕುವುದರಿಂದ ಹುಲ್ಲುಗಾವಲು ಜತೆ ವನ್ಯಜಿವಿಗಳ ನಾಶಕ್ಕೂ ಸಹ ಕಾರಣವಾಗುತ್ತದೆ. ಹಾಗಾಗಿ, ಕಾಡಿಗೆ ಬೆಂಕಿ ಹಚ್ಚುವುದನ್ನು ತಡೆಯಲು ಪ್ರತಿಯೊಬ್ಬರೂ ಸಹಕರಿಸಬೇಕಾಗುತ್ತದೆ ಎಂದರು.

ಚಿಗುರು ಯುವಜನ ಸಂಘದ ಅಧ್ಯಕ್ಷ ಮಂಜುನಾಥ್​ ಅಮಲಗೊಂದಿ ಮಾತನಾಡಿ, ಪ್ರಸ್ತುತ ಭಾರತದಲ್ಲಿ ಶೇ.24.62ರಷ್ಟು ಹಸಿರೀಕರಣದಿಂದ ಕೂಡಿದೆ. ಅದರಲ್ಲಿ ಶೇ.21.71ರಷ್ಟು ಅರಣ್ಯ ಪ್ರದೇಶವಾಗಿದ್ದು, ಉಳಿದಂತೆ ಶೇ.2.91 ರಷ್ಟು ಕೃಷಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿನ ಹಸಿರನ್ನು ಕಾಣಬಹುದಾಗಿದೆ ಎಂದರು.ನಿಸರ್ಗ ನಡಿಗೆಯಲ್ಲಿ ಮಕ್ಕಳಿಗೆ ಫೈರ್​ ಲೈನ್​(ಬೆಂಕಿ ಗೆರೆಗಳ) ಬಗ್ಗೆ, ಮರಗಳ ಬಗ್ಗೆ, ಪಕ್ಷಿಗಳ ಬಗ್ಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರೀರಂಗಪ್ಪ, ರಂಗನಾಥಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net