ನಿಷ್ಪಕ್ಷಪಾತ ಮತ್ತು ನ್ಯಾಯ ಸಮ್ಮತವಾದ ಚುನಾವಣೆ ಆಗ್ರಹ

ನಿಷ್ಪಕ್ಷಪಾತ ಮತ್ತು ನ್ಯಾಯ ಸಮ್ಮತವಾದ ಚುನಾವಣೆ ಆಗ್ರಹ
Published on

ಹಾಸನ: ಚನ್ನರಾಯಪಟ್ಟಣದ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಗೆ ಕಳೆದ ಹತ್ತು ವರ್ಷಗಳಿಂದ ಆಡಳಿತ ಮಂಡಳಿಗೆ ಚುನಾವಣೆ ನಡೆಯದೆ ಇರುವುದರಿಂದ ಹೈಕೋರ್ಟ್ ಆದೇಶದಂತೆ ಆರು ತಿಂಗಳ ಒಳಗೆ ನಿಷ್ಪಕ್ಷಪಾತ ಮತ್ತು ನ್ಯಾಯ ಸಮ್ಮತವಾದ ಚುನಾವಣೆ ನಡೆಸಬೇಕು ಮತ್ತು ಅಲ್ಲಿ ನಡೆದಿರುವಂತಹ ಅಕ್ರಮಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಒತ್ತಾಯಿಸಿದರು.
ಹೇಮಾವತಿ ಸಕ್ಕರೆ ಕಾರ್ಖಾನೆಯನ್ನು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ನೀಡಲಾಗಿದೆ. ಆಡಳಿತ ಮಂಡಳಿ ಅವಧಿ ಮುಗಿದು 8 ವರ್ಷಗಳಾದರೂ ಕೂಡ ಇದುವರೆಗೂ ಚುನಾವಣೆ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಲಾಗಿತ್ತು. ಮುಂದಿನ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಈಗ ಚುನಾವಣೆಗಾಗಿ ಒಂದೇ ದಿನದಲ್ಲಿ 4000 ನಕಲಿ ಷೇರುದಾರರನ್ನು ನೋಂದಾಯಿಸಿ ರಸೀದೆ ನೀಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.
ಈ ಆಡಳಿತ ಮಂಡಳಿಗೆ ಹಾಲಿ ಶಾಸಕ ಸಿಎನ್ ಬಾಲಕೃಷ್ಣ ಅವರು ಕೂಡ ನಿರ್ದೇಶಕರಾಗಿದ್ದು, ಅವರ ಹಸ್ತಕ್ಷೇಪದಿಂದ ಇಷ್ಟೆಲ್ಲ ನಡೆಯುತ್ತಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ಅರ್ಹ ಷೇರುದಾರರಿಗೆ ಮಾತ್ರ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು. ನಕಲಿ ಷೇರುದಾರರನ್ನ ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಈ ಕಾರ್ಖಾನೆಗೆ ಜಿಲ್ಲಾಧಿಕಾರಿಗಳನ್ನು ಆಡಳಿತ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆದರೆ ಸಾಮಾನ್ಯ ಸಭೆ ನಡೆಸಲು ದುಂದು ವೆಚ್ಚ ಮಾಡಿದ್ದಾರೆ ಮತ್ತು ಸುಳ್ಳು ಲೆಕ್ಕಗಳನ್ನು ತೋರಿಸುತ್ತಿದ್ದಾರೆ. ಇದರ ವಿರುದ್ಧವೂ ಕೂಡ ಸೂಕ್ತ ತನಿಖೆಯಾಗಬೇಕು. ಒಂದೇ ಮನೆಯಲ್ಲಿ ಮೂರ್ನಾಲ್ಕು ಸದಸ್ಯರನ್ನು ಷೇರುದಾರರನ್ನಾಗಿ ಮಾಡಲಾಗಿದೆ. ಸಹಕಾರ ಸಂಘದ ಸಕ್ಕರೆ ಕಾರ್ಖಾನೆಯ ಬೈಲಾ ಪ್ರಕಾರ ಚುನಾವಣೆ ನಡೆಯಬೇಕು ಎಂದು ಮನವಿ ಮಾಡಿದರು.
ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ನೀಡಲಾಗಿದ್ದು, ಇವರಿಂದ 21 ಕೋಟಿ ರೂ ಕಟ್ಟಬೇಕಾಗಿದೆ. ಆದರೆ ಇದುವರೆಗೂ ಕಟ್ಟಿಲ್ಲ. ಈಗ ಬಡ್ಡಿ ಮತ್ತು ಅಸಲು ಸಮೇತ ಕಟ್ಟಬೇಕು. ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಮಾಸಾಂತ್ಯದ ಒಳಗೆ ಅಭ್ಯರ್ಥಿ ಘೋಷಿಸಿ:
ಮುಂಬರುವ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಗೆಲ್ಲುವ ಉತ್ತಮ ವಾತಾವರಣವಿದೆ. ಹಲವು ಜನ ಆಕಾಂಕ್ಷೆಗಳಿದ್ದಾರೆ. ಪಕ್ಷ ತೀರ್ಮಾನ ಮಾಡಿ ಅಭ್ಯರ್ಥಿ ಹೆರಸರನ್ನು ಈ ಮಾಸಾಂತ್ಯದೊಳಗೆ ಘೋಷಿಸಬೇಕು ಎಂದು ಗೋಪಾಲಸ್ವಾಮಿ ಒತ್ತಾಯಿಸಿದರು.
ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಈ ಹಿಂದೆಯೂ ಕೂಡ ಆರು ತಿಂಗಳ ಮುಂಚೆ ಟಿಕೆಟ್ ನೀಡಬೇಕು. ಯಾರಿಗೆ ಟಿಕೆಟ್ ಕೊಟ್ಟರೂ ನಾವೆಲ್ಲರೂ ಒಮ್ಮತದಿಂದ ಚುನಾವಣೆ ಮಾಡುತ್ತೇವೆ ಎಂದು ಹೇಳಿದ್ದೆ. ಆದರೆ ಚುನಾವಣೆ ಹತ್ತಿರವಿದ್ದಾಗ ಟಿಕೆಟ್ ನೀಡಿದ್ದು ಸಾಕಷ್ಟು ಸಮಸ್ಯೆಯಾಯಿತು. ಆದ್ದರಿಂದ ಶೀಘ್ರದಲ್ಲೇ ಅಭ್ಯರ್ಥಿ ಆಯ್ಕೆ ಮಾಡುವಂತೆ ಒತ್ತಾಯಿಸಿ ಬೆಳಗಾವಿಗೆ ತೆರಳಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಒತ್ತಡ ಹೇರಲಾಗುವುದು ಎಂದು ಹೇಳಿದರು

ನಾಚಿಕೆಗೇಡಿನ ಸಂಗತಿ: ಶ್ರೇಯಸ್ ಪಟೇಲ್
ಭವಾನಿ ರೇವಣ್ಣ ಅವರ ನಡವಳಿಕೆ ದರ್ಪ, ದುರಹಂಕಾರ ಕ್ಷೇತ್ರದ ಜನರಿಗೆ ತಿಳಿದಿತ್ತು. ಆದರೆ ಈಗ ಎಲ್ಲರಿಗೂ ಗೊತ್ತಾಗಿದೆ. ಓರ್ವ ರೈತ ಬೈಕಿನಲ್ಲಿ ತೆರಳುತ್ತಿದ್ದಾಗ ಆಕಸ್ಮಿಕವಾಗಿ ಅಪಘಾತವಾಗಿದೆ. ಆದರೆ ಆತನನ್ನು ರಸ್ತೆಯಲ್ಲಿ ಹೀನಾಯವಾಗಿ ಬೈದಿರುವುದು ಖಂಡನೀಯ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ಇಂತಹ ಸದಸ್ಯರು ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net