

ಸಿರಿಗೆರೆ: ಕಾಯಕವೆಂದರೆ ಬೆವರು ಸುರಿಸಿ, ಮೈಬಗ್ಗಿಸಿ ಶ್ರಮ ಹಾಕಿ, ಸತ್ಯಸಂಧನಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುವುದಾಗಿದೆ ಎಂದು ಸಾಹಿತಿ ಫೈಜ್ನಟ್ರಾಜ್ ಅಭಿಪ್ರಾಯಪಟ್ಟರು.
ಸಿರಿಗೆರೆಯ ಎಂ.ಬಸವಯ್ಯ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ದಂದಣ-ದತ್ತಣ’ ಗೋಷ್ಠಿಯಲ್ಲಿ ಶಿವಶರಣರ ದೃಷ್ಟಿಯಲ್ಲಿ ಕಾಯಕ ಮತ್ತು ದಾಸೋಹ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಸತ್ಯ ಶುದ್ಧವಲ್ಲದ ಕೆಲಸ ಕಾಯಕವಲ್ಲ ಎಂದು ಹೇಳಿದರು.
ಕಾಯಕದಲ್ಲಿ ನಿಷ್ಠೆ ಪ್ರಧಾನ, ಆವ ಕಾಯಕ ಮಾಡಿದೊಡೆ ಕಾಯಕವೊಂದೇ, ಅದು ಸಮಾಜಮುಖಿ ಆಗಬೇಕು. ಹಸಿವು ಜನರಿಗೆ ಜೀವನವನ್ನು ಕಲಿಸುತ್ತದೆ. ಹುಟ್ಟು ಸಾವಿನ ನಡುವೆ ಏನನ್ನಾದರೂ ಸಾಧಿಸುವ ಕಾಯಕ ನಿಮ್ಮದಾಗಬೇಕು. ಕಾಯಕ ಸತ್ಯ, ನಿಷ್ಠೆ ಪ್ರಾಮಾಣಿಕತೆಗಳಿಂದ ಶುದ್ಧ ಮನಸ್ಸಿನಿಂದ ಕೂಡಿರಬೇಕು ಎಂದರು.
ಗಳಿಕೆ, ಉಳಿಕೆ ಮತ್ತು ಬಳಕೆ ಎಂಬ ತತ್ವದ ಅಡಿಯಲ್ಲಿ ಕಾಯಕದಿಂದ ದೇವರನ್ನು ಕಾಣಬಹುದು. ಗುರು, ಲಿಂಗ ಜಂಗಮರ ಸೇವೆಯನ್ನು ಕಾಯಕದಲ್ಲಿ ತ್ರಿವಿಧ ನೆಲೆಗಳಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.
ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಪ್ರಾಸ್ತಾವಿಕ ಮಾತನಾಡಿ, ಕಾಯಕವೆಂದರೆ ದೈಹಿಕ ಶ್ರಮ, ದುಡಿಮೆ, ಕೆಲಸ ಎಂಬ ಅರ್ಥವಿದ್ದರೂ ಬಸವಾದಿ ಶಿವಶರಣರು ಕಾಯಕಕ್ಕೆ ತಮ್ಮದೇ ಆದ ವಿಶೇಷ ನೆಲೆಯಲ್ಲಿ ಅರ್ಥೈಸಿದ್ದಾರೆ. ಕಾಯಕವನ್ನು ಸಾರ್ಥಕ ಭಾವದಿಂದ ಕೈಗೊಳ್ಳುವುದೇ ವೃತ್ತಿಯಾಗಿದೆ. ಏನನ್ನೂ ಬಯಸದೆ ಶ್ರದ್ಧೆಯಿಂದ ಮಾಡುವ ಕೆಲಸವನ್ನು ಕಾಯಕ ಎನ್ನಲಿದ್ದಾರೆ ಎಂದರು.
ಆಯ್ದಕ್ಕಿ ಮಾರಯ್ಯನವರ ವಚನದಂತೆ ವಿದ್ಯಾಭ್ಯಾಸದಲ್ಲಿ ಶ್ರದ್ಧೆ ಮತ್ತು ನಿಷ್ಠೆ ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸುವಲ್ಲಿ ನೆರವಾದ ವ್ಯಕ್ತಿ, ಸಂಘ-ಸಂಸ್ಥೆ, ಸಮಾಜ ಹಾಗೂ ದೇಶದ ಋಣವನ್ನು ಅಲ್ಪವಾದರೂ ತೀರಿಸುವ ಪ್ರಯತ್ನ ಮಾಡವುದೇ ದಾಸೋಹ ಎಂದು ತಿಳಿಸಿದರು.
ಪ್ರಾಚಾರ್ಯ ಜಿ. ಸಿ. ಪ್ರವೀಣ್ ಕುಮಾರ್, ಉಪನ್ಯಾಸಕಿ ಎನ್.ಪಿ.ರಮ್ಯಾ ಇದ್ದರು. ಐಶ್ವರ್ಯ ಮತ್ತು ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು. ಪಿ.ಸ್ವಪ್ನ ಸ್ವಾಗತಿಸಿ, ಎಚ್.ಎಂ. ಸಾಗರ್ ವಂದಿಸಿದರು, ಕೆ.ಪಿ.ದೇವರಾಜ ನಿರೂಪಿಸಿದರು.