

ನೆಲಮಂಗಲ: ಕೋವಿಡ್-19 ಸಂದರ್ಭದಲ್ಲಿ ಜನಸಾಮಾನ್ಯರ ಸೇವೆ ಮಾಡುವ ಅವಕಾಶ ದೊರೆತ್ತಿದ್ದು, ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ರವಿ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೋವಿಡ್ ತಡೆಗೆ ಸರ್ಕಾರ ಲಾಕ್‌ಡೌನ್ ಮಾಡಿದೆ. ಪ್ರತಿಯೊಬ್ಬ ಅಧಿಕಾರಿಗಳು ಮಾನವೀಯತೆಯ ದೃಷ್ಟಿಯಿಂದ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಬೇಕು. ಗ್ರಾಮೀಣ ಭಾಗದ ಜನರಿಗೆ ಪಡಿತರ, ಅಂಗನವಾಡಿಯಿಂದ ದೊರೆಯುವ ಆಹಾರ, ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ನೀಡುವ ಆಹಾರ ಸಮರ್ಪಕವಾಗಿ ತಲುಪುತ್ತಿದೆಯೇ ಎಂಬ ಬಗ್ಗೆ ತಹಸೀಲ್ದಾರ್ ನಿಗಾವಹಿಸಬೇಕು ಎಂದರು.
ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಇಲ್ಲಧಿರುವುದು ಬಹಳ ಸಮಸ್ಯೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಪರ್ರಾಯವಾಗಿ ಸೂಕ್ತ ಆಸ್ಪತ್ರೆ ಸೂಚಿಸಬೇಕಾಗಿದೆ ಎಂದರು.
ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಗ್ರಾಮೀಣ ಭಾಗದ ಜನರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದು ಪ್ರತಿಯೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಸ್ಪಂದಿಸಬೇಕು. ಕೋವಿಡ್‌ಮುಕ್ತ ತಾಲೂಕು ನಿರ್ಮಾಣ ಮಾಡಲು ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದರು.
ವಿಶೇಷ ಗ್ರಾಮಪಡೆ ರಚನೆ: ತಾಲೂಕಿನ 21 ಗ್ರಾಪಂಗಲ್ಲಿ ಸ್ಥಳೀಯ ಪಿಡಿಒ, ಕಾರ್ಯದರ್ಶಿ, ಗ್ರಾಮಲೆಕ್ಕಾಧಿಕಾರಿ, ಬಿಲ್ ಕಲೆಕ್ಟರ್, ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರನ್ನು ಒಗ್ಗೂಡಿಸಿ ಗ್ರಾಮಪಡೆ ರಚನೆ ಮಾಡಲಾಗಿದೆ. ಪ್ರತಿ 3 ಪಂಚಾಯಿತಿಗೆ ಒಬ್ಬರಂತೆ 7 ಮಂದಿ ನೋಡಲ್ ಅಧಿಕಾರಿಗಳು ನೇಮಕ ಮಾಡಲಾಗಿದೆ. ಕೋವಿಡ್ ಸಂಚಾರಿ ಕ್ಲಿನಿಕ್ ಆರಂಭ ಮಾಡಲಾಗಿದೆ. ತಾಲೂಕಿಗೆ ಜಿಲ್ಲಾಡಳಿತದಿಂದ ಕೋವಿಡ್ ನಿಯಂತ್ರಣಕ್ಕೆ 50 ಲಕ್ಷ ಹಣ ಬಿಡುಗಡೆಯಾಗಿದೆ. ಸುಮಾರು 15 ಲಕ್ಷ ಹಣ ಖರ್ಚು ಮಾಡಲಾಗಿದೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ಕೋವಿಡ್-19 ಪ್ರಕರಣ ಹೆಚ್ಚಳ: ತಾಲೂಕಿನಾದ್ಯಂತ 2021ರ ಏ.1 ರಿಂದ ಇಲ್ಲಿಯವರೆಗೂ 6,354 ಪ್ರಕರಣ ಪತ್ತೆಯಾಗಿದ್ದು, 4618 ಮಂದಿ ಗುಣರಾಗಿದ್ದಾರೆ. 135 ಮಂದಿ ಸೋಂಕಿನಿಂದ ಮೃತ ಪಟ್ಟಿದ್ದಾರೆ. ತಾಲೂಕಿನಾದ್ಯಂತ ಸುಮಾರು 31632 ಮಂದಿಗೆ ಕೊವೀಡ್-19 ಲಸಿಕೆ ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪಿ.ಹರೀಶ್ ಮಾಹಿತಿ ನೀಡಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ರಂಗನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಇಒ ಮೋಹನ್‌ಕುಮಾರ್, ಸಹಾಯಕ ನಿರ್ದೇಶಕ ಪದ್ಮನಾಭ, ಬಿಇಒ ಕೆ.ಸಿ.ರಮೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಶಿವಣ್ಣ, ಸಿಡಿಪಿಒ ಲತಾ, ಅಬಕಾರಿ ನಿರೀಕ್ಷಕ ಕೃಷ್ಣಮೂರ್ತಿ, ವೃತ್ತ ನಿರೀಕ್ಷಕ ಹರೀಶ್, ಎಸ್‌ಐ ಸುರೇಶ್ ಮತ್ತಿತರರು ಉಪಸ್ಥಿತರಿದರು.