ನಿಷ್ಠೆಯಿಂದ ಕಾರ್ಯ ನಿರ್ವಹಿಸಿ

24 yerriswamy 09
Published on

ಬಳ್ಳಾರಿ :ಹೋಟೆಲ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಹಲವಾರು ಉದ್ಯೋಗ ಅವಕಾಶಗಳಿದ್ದು, ನಿಷ್ಠೆಯಿಂದ ಕಾರ್ಯ ನಿರ್ವಹಿಸಿ, ಜೀವನ ರೂಪಿಸಿಕೊಳ್ಳಿ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಸಲಹೆ ನೀಡಿದರು.
ನಗರದ ಜಿಪಂ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೌಶಲ್ಯಾಭಿವೃದ್ಧಿ ಇಲಾಖೆ, ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಹಯೋಗದೊಂದಿಗೆ ಶುಕ್ರವಾರ ನಡೆದ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸನಡಿ 60 ದಿನದ ಕೌಶಲ್ಯ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ಧಿ ಕೇಂದ್ರವು ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸನಡಿ 60 ದಿನದ ಕೌಶಲ್ಯ ತರಬೇತಿ ನೀಡಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ವಿವಿಧ ಹೆಸರಾಂತ ಹೋಟೆಲ್ಗಳಲ್ಲಿ ಸಂದರ್ಶನದ ಮೂಲಕ ಉದ್ಯೋಗ ಕಲ್ಪಿಸಿದೆ. ಆಯ್ಕೆಯಾದವರು ಸಾಧನೆಯ ಹಾದಿ ಮುಂದುವರೆಸಬೇಕು ಎಂದು ಆಶಿಸಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಒಂದು ದೇಶ ಅಭಿವೃದ್ಧಿಯಾಗಲು ಮೂರು ಪ್ರಮುಖ ಕ್ಷೇತ್ರಗಳಾದ ಕೃಷಿ, ಕೈಗಾರಿಕಾ ಮತ್ತು ಸೇವಾ ವಲಯಗಳ ಪಾತ್ರ ಬಹುಮುಖ್ಯವಾಗಿದ್ದು, ಅದರಲ್ಲಿ ಸೇವಾ ವಲಯದಿಂದ ಯುವ ಪೀಳಿಗೆಗೆ ಉದ್ಯೋಗಗಳು ಹೆಚ್ಚಾಗಿ ಸೃಷ್ಟಿಯಾಗುತ್ತವೆ ಎಂದು ಅಭಿಪ್ರಾಯ ಪಟ್ಟರು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಇದೇ ವೇಳೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net