

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಇದಕ್ಕೆ ಕಾರಣರಾದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದೆ. ಸೂಕ್ತ ಸ್ಥಾನಮಾನ ನೀಡುತ್ತಿಲ್ಲ. ಅಭಿವೃದ್ಧಿಗೆ ಅನುದಾನವೂ ಬಿಡುಗಡೆಯಾಗುತ್ತಿಲ್ಲ.
ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲೆಯ ಮುಖಂಡರ, ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಕೈ ಕಾರ್ಯಕರ್ತರು ಸಚಿವರ ಮುಂದೆ ಅಳಲು ತೋಡಿಕೊಂಡ ಪರಿ ಇದು.
ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಜನರ ಮನ ಗೆದ್ದಿದೆ. ಆದರೆ, ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಪರಿಗಣಿಸುತ್ತಿಲ್ಲ. ಅಧಿಕಾರದಲ್ಲಿದ್ದಾಗ ಗುರುತಿಸಿ ಪ್ರೋತ್ಸಾಹಿಸಿದರೆ, ಮುಂಬರುವ ದಿನಗಳಲ್ಲೂ ಬೆನ್ನೆಲುಬಾಗಿ ಶ್ರಮಿಸುತ್ತಾರೆ. ಆದ್ದರಿಂದ ಕಡೆಗಣನೆ ಸಲ್ಲದು ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ನಿಮ್ಮೆಲ್ಲರ ನೋವು ಅರ್ಥವಾಗಿದೆ. ಪಕ್ಷಕ್ಕೆ ಕಾರ್ಯಕರ್ತರೆ ಬೆನ್ನೆಲುಬು. ಹೀಗಾಗಿ ಎಂದಿಗೂ ಕಡೆಗಣಿಸಿಲ್ಲ. ಸಕಾಲದಲ್ಲಿ ಸೂಕ್ತ ಸ್ಥಾನಮಾನ ದೊರಕಲಿದೆ. ಈ ಕುರಿತು ಅನುಮಾನ, ನಿರಾಸೆಯಾಗುವುದು ಬೇಡ ಎಂದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 15 ತಿಂಗಳಾಗಿದೆ. ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೆ, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಾಡಿದ್ದು, ಅದನ್ನು ತೀರಿಸಲು ನಮ್ಮ ಸರ್ಕಾರ ಹಣ ಹೊಂದಿಸುತ್ತಿದೆ. ಹೀಗಾಗಿ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ನಿರೀಕ್ಷೆಯಂತೆ ಅನುದಾನ ಬಿಡುಗಡೆಯಾಗಿಲ್ಲ. ಮುಂದಿನ ದಿನಗಳಲ್ಲಿ ಅನುದಾನ ಖಂಡಿತ ಸಿಗಲಿದೆ ಎಂದರು.
ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದರ ಪರಿಣಾಮ ಸಚಿವನಾಗಿದ್ದೇನೆ. ಸೂಕ್ತ ಸಮಯದಲ್ಲಿ ನಾಯಕರು ಗುರುತಿಸಿ ಸ್ಥಾನಮಾನ ನೀಡಲಿದ್ದಾರೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಿರಿ. ನಿಗಮ ಮಂಡಳಿಗಳಿಗೆ ನೀಡಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ 20 ತಿಂಗಳಿಗೆ ಮಾತ್ರ. ಇನ್ನುಳಿದ 20 ತಿಂಗಳು ಬೇರೆಯವರಿಗೂ ಅವಕಾಶ ದೊರೆಯಲಿದೆ. ಮುಸ್ಲಿಂ ಸಮುದಾಯಕ್ಕೂ ಆದ್ಯತೆ ನೀಡಲಿದ್ದಾರೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಅಧ್ಯಕ್ಷೆ ಗೀತಾ ನಂದಿನಿಗೌಡ, ಪದಾಧಿಕಾರಿಗಳಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ವೆಂಕಟೇಶ್, ಲಕ್ಷ್ಮಿಕಾಂತ್, ಪ್ರಕಾಶ್, ನಾಗರಾಜ್, ಜಾಹ್ನವಿ, ಜಾಕಿರ್, ಖಾಸಿಂ ಆಲಿ, ಅಲ್ಲಾಭಕ್ಷಿ, ನರಸಿಂಹರಾಜು, ನಜ್ಮಾತಾಜ್, ಮೋಕ್ಷಾ ರುದ್ರಸ್ವಾಮಿ, ಎನ್.ಡಿ.ಕುಮಾರ್ ಇತರರಿದ್ದರು.