

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ನಿಷೇಧಿತ ಪದ ಬಳಸುವ ಮೂಲಕ ಜಾತಿ ನಿಂದನೆ ಮಾಡಿರುವ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸವಿತಾ ಸಮಾಜದ ಮುಖಂಡರು ಬುಧವಾರ ನಗರ ಠಾಣೆ ಇನ್ಸ್ಪೆಕ್ಟರ್ ಅಭಯಪ್ರಕಾಶ್ ಸೋಮನಾಳ್ ಅವರಿಗೆ ಮನವಿ ಸಲ್ಲಿಸಿದರು.
ರಾಹೀಲ್ ಷರೀಪ್ ಎನ್ನುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ನಮ್ಮ ಸಮಾಜಕ್ಕೆ ಅಪಮಾನಿಸುವ, ನೋವುಂಟು ಮಾಡುವ ನಿಷೇಧಿತ ಶಬ್ದವನ್ನು (ಹಜಾಮ) ಬಳಸುವ ಮೂಲಕ ಇಡಿ ನಮ್ಮ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆ. ಇವರ ವೈಯುಕ್ತಿಕ ರಾಜಕೀಯ ಹೇಳಿಕೆಗಳಿಗೆ ಒಂದು ಸಮುದಾಯವನ್ನು ಅಪಮಾನಿಸುವಂತೆ ಪದ ಬಳಕೆ ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವರು ನಮ್ಮ ಮನವಿಗೆ ಸ್ಪಂಧಿಸಿ (ಹಜಾಮ) ಪದವನ್ನು ಕಡತದಿಂದ ಕೈಬಿಟ್ಟು, ಈ ಪದವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆದರೂ ಈ ನಿಷೇಧಿತ ಪದವನ್ನು ಸಾಮಾಜಿಕ ಜಾಲತಾಣದಲ್ಲಿ ಬಳಸುವ ಮೂಲಕ ಕ್ಷೌರಿಕ ಸಮುದಾಯಕ್ಕೆ ಅಪಮಾನಿಸುತ್ತಿದ್ದಾರೆ. ಜಾತಿ ನಿಂದನೆ ಮಾಡಿರುವ, ನಿಷೇಧಿತ ಪದವನ್ನು ಬಳಕೆ ಮಾಡುವ ಮೂಲಕ ಜಾತಿ ನಿಂದನೆ ಮಾಡಿರುವುದಲ್ಲದೆ, ಒಂದು ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿರುತ್ತಾರೆ ಎಂದು ದೂರಲಾಗಿದೆ.
ಸಾಮಾಜಿಕ ಜಾಲತಾಣಗಳನ್ನು ಈ ರೀತಿ ಸಮಾಜದ ಶಾಂತಿಭAಗ ಮಾಡುವಂತಹ, ಒಂದು ಸಮಾಜವನ್ನೆ ಅಪಮಾನಿಸುವಂತಹ ಹಾಗೂ ಕಾನೂನಿನ್ವಯ ಬಳಸಬಾರದ ಪದಗಳನ್ನು ಸಾರ್ವಜನಿಕವಾಗಿ ಬಳಸುವಂತಹ ಕಾರ್ಯಗಳಿಗೆ ಬಳಸುವುದು ಭಾರತೀಯ ನ್ಯಾಯ ಸಂಹಿತೆ ೨೦೨೩ ರ ಕಲಂ ೨೯೬ ರ ಅನ್ವಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ತಿಳಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಜೆ.ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಎಚ್.ಇ.ಸಂದೇಶ್, ಉಪಾಧ್ಯಕ್ಷರಾದ ಟಿ.ಪಿ.ವಿಜಯಕುಮಾರ್, ಟೈಟಾನಿಕ್ ಮಂಜುನಾಥ್, ರತೀಶ್, ರಾಜ್ಯ ಸಂಘದ ನಿರ್ದೇಶಕ ರವಿಕುಮಾರ್, ಕೌಶಿಕ್ ಉಪಸ್ಥಿತರಿದ್ದರು.