

ಚನ್ನಪಟ್ಟಣ: ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆಗಳ ಆಯೋಜನೆಯನ್ನು ನಿಷೇಧಿಸಿದ್ದರೂ ತಾಲೂಕಿನ ಐತಿಹಾಸಿಕ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆಗೆ ಮಂಗಳವಾರ ಸಿದ್ಧತೆಗಳು ಆರಂಭಗೊಂಡಿವೆ. ನೂರಾರು ರಾಸುಗಳೊಂದಿಗೆ ರಾತ್ರೋರಾತ್ರಿ ಬಂದಿರುವ ರೈತರು ಜಾತ್ರೆಯ ಮೈದಾನದಲ್ಲಿ ನೆಲೆಯೂರಿದ್ದಾರೆ.
ಮಕರ ಸಂಕ್ರಾತಿಯ ಮರುದಿನ ಪ್ರತಿವರ್ಷ ಕೆಂಗಲ್ ದನಗಳ ಜಾತ್ರೆ ನಡೆಯುತ್ತದೆ. ಈ ಭಾಗದಲ್ಲಿ ಅಯ್ಯನಗುಡಿ ದನಗಳ ಜಾತ್ರೆ ಎಂದೇ ಇದು ಪ್ರಸಿದ್ಧವಾಗಿದೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದುಪಡಿಸಿತ್ತು. ಬ್ರಹ್ಮರಥೋತ್ಸವ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಾಂಕೇತಿಕವಾಗಿ ಮಾಡಲು ಅನುಮತಿ ನೀಡಿತ್ತು.
ವಾಪಸ್ ಕಳಿಸಿದ್ದ ದೇಗುಲ ಅಧಿಕಾರಿಗಳು: ಕರೊನಾ ಹಿನ್ನೆಲೆಯಲ್ಲಿ ಜಾತ್ರೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದ್ದರಿಂದ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಗಳು ಭಾನುವಾರ ಮತ್ತು ಸೋಮವಾರ ದನಗಳೊಂದಿಗೆ ಬಂದಿದ್ದ ರೈತರನ್ನು ವಾಪಸು ಕಳಿಸಿದ್ದರು. ಪೊಲೀಸರು ಕೂಡ ಇದಕ್ಕೆ ಸಹಕರಿಸಿದ್ದರು.
ದಿಢೀರನೆ ಬಂದ ರೈತರು: ಮಂಗಳವಾರ ಸಂಜೆ ವೇಳೆಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸೆಡ್ಡು ಹೊಡೆದ ರೈತರು ೆನ್‌ನಲ್ಲಿ ಪರಸ್ಪರ ಮಾಹಿತಿ ರವಾನಿಸಿಕೊಂಡು ರಾಸುಗಳೊಂದಿಗೆ ಜಾತ್ರಾಸ್ಥಳಕ್ಕೆ ಬಂದಿದ್ದಾರೆ. ದೇವಾಲಯದ ಅಕ್ಕಪಕ್ಕ ಹಾಗೂ ಹಿಂಭಾಗದಲ್ಲಿರುವ ಖಾಸಗಿ ಜಾಗದಲ್ಲಿ ರಾಸುಗಳನ್ನು ಕಟ್ಟಿ ಮಾರಾಟಕ್ಕಿಟ್ಟಿದ್ದಾರೆ. ಖರೀದಿದಾರರು ಕೂಡ ಬಂದು, ಎಂದಿನಂತೆ ದನಗಳ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಇದನ್ನು ತಡೆಯಲು ಸಾಧ್ಯವಾಗದೆ ದೇವಾಲಯದ ಆಡಳಿತ ಮಂಡಳಿ ಹಾಗೂ ತಾಲೂಕು ಆಡಳಿತ ನಿಸ್ಸಾಹಾಯಕವಾಗಿ ನಿಂತಿದೆ.
ದೇವಾಲಯದ ಆವರಣದಲ್ಲಿ ಅವಕಾಶ ಇಲ್ಲ: ಜಿಲ್ಲಾಡಳಿತದ ನಿರ್ಧಾರಕ್ಕೆ ವಿರುದ್ಧವಾಗಿ ರೈತರು ಬಂದರೂ ದೇಗುಲದ ಆಡಳಿತ ಮಂಡಳಿ ಜಾಣಗುರುಡು ಪ್ರದರ್ಶಿಸುತ್ತಿದೆ. ತನ್ಮೂಲಕ ತಮ್ಮದೇ ನಿಯಮಗಳನ್ನು ಗಾಳಿಗೆ ತೂರಲಿ ಅವಕಾಶ ಮಾಡಿಕೊಟ್ಟಿದೆ.
ದೇವಾಲಯದ ಆವರಣದಲ್ಲಿ ಯಾವ ದನಗಳನ್ನು ಸಹ ಕಟ್ಟಿ ಹಾಕಿಲ್ಲ. ಅದಕ್ಕೆ ಅವಕಾಶವನ್ನು ನೀಡಿಲ್ಲ. ದೇವಾಲಯದ ಹೊರಗಡೆ ಖಾಸಗಿ ಜಾಗದಲ್ಲಿ ದನಕರುಗಳನ್ನು ಮಾರಾಟ ಮಾಡುತ್ತಿರುವ ಸಂಗತಿ ನಮಗೆ ಸಂಬಂಧಿಸುವುದಿಲ್ಲ. ತಮ್ಮಣ್ಣಗೌಡ ದೇವಾಲಯದ ಕಾರ್ಯನಿರ್ವಾಹಕಧಿಕಾರಿ *** ಕೆಂಗಲ್ ದನಗಳ ಜಾತ್ರೆಯನ್ನು ರದ್ದುಪಡಿಸಲಾಗಿದೆ. ಮಾಹಿತಿ ಕೊರತೆಯಿಂದ ಭಾನುವಾರ, ಸೋಮವಾರ ಕೆಲ ರೈತರು ರಾಸುಗಳನ್ನು ಕರೆತಂದಿದ್ದರು. ಅವರನ್ನು ವಾಪಸು ಕಳಿಸಲಾಗಿದೆ. ಮಂಗಳವಾರ ಸಂಜೆ ದಿಢೀರನೆ ಜಾತ್ರೆ ಸೇರಿರುವ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಖಾಸಗಿ ಜಾಗದಲ್ಲಿ ಅವಕಾಶ ನೀಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಎಲ್. ನಾಗೇಶ್ ಚನ್ನಪಟ್ಟಣ ತಹಸೀಲ್ದಾರ್