

ಎಂ.ರಾಮೇಗೌಡ ನಂದಗುಡಿ
ಗಣೇಶ ಚತುರ್ಥಿಗೆ ದಿನಗಣನೆ ಶುರುವಾಗಿದ್ದು, ಗೌರಿ, ಗಣೇಶ ಮೂರ್ತಿಗಳು ವಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ನಡುವೆ ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಮೂರ್ತಿಗಳ ತಯಾರಿ, ಮಾರಾಟ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ ಕೆಲ ತಯಾರಕರು, ವ್ಯಾಪಾರಸ್ಥರು ಪಿಒಪಿ ಮೂರ್ತಿಗಳ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.
ಮಣ್ಣಿನಿಂದ ಮಾಡಿರುವ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಎಂಬ ಕಾರಣಕ್ಕೆ ಪಿಒಪಿ ಮೂರ್ತಿಗಳ ಮಾರಾಟ ಮುಂದುವರಿದಿದೆ ಎನ್ನುತ್ತಾರೆ ಕೆಲ ಮೂರ್ತಿ ತಯಾರಕರು.
ಸ್ಥಳೀಯ ಕೆರೆಗಳಲ್ಲಿ ನೀರು ಇರುವ ಕಾರಣ ಮಣ್ಣು ತೆಗೆಯಲು ಸಾಧ್ಯವಾಗದೆ, ದೂರದ ಕೆರೆಗಳಿಂದ ಮಣ್ಣನ್ನು ತಂದು ಈ ಬಾರಿ ವಿಶೇಷವಾಗಿ ರಾಮಲಲ್ಲಾ ಗಣಪತಿ, ನಂದಿವಾಹನ ಗಣಪತಿ, ಸಾಯಿಬಾಬ ಗಣಪತಿ, ಕುದುರೆ ಸಿಂಹಾಸನ ಗಣಪತಿ, ದೇವಿ ಗಣಪ, ಚಂದ್ರ ಗಣಪ, ಆಂಜಿನೇಯ ಪರ್ವತ ಗಣಪ, ಸನ್‌ಪ್ಲವರ್ ಗಣಪ ಹಾಗೂ ಅನೇಕ ರೀತಿಯ ಗಣಪತಿಗಳನ್ನ ಮಾಡಿದ್ದು, ಜನ ಯಾವುದಕ್ಕೆ ಆಸಕ್ತಿ ತೋರುತ್ತಾರೆ ನೋಡಬೇಕಿದೆ ಎನ್ನುತ್ತಾರೆ ಮೂರ್ತಿ ತಯಾರಕರು. ಹಬ್ಬದ ಸಂದರ್ಭದಲ್ಲಿ ಮೂರ್ತಿಗಳನ್ನು ಮಾರಾಟ ಮಾಡಲು ಸರಿಯಾದ ಸ್ಥಳಾವಕಾಶ ಇಲ್ಲದೆ ಪರದಾಡುವಂತಾಗಿದ್ದು, ಹೊಸಕೋಟೆ ತಾಲೂಕು ನಂದಗುಡಿ, ತಾವರೆಕೆರೆ, ಚಿಕ್ಕನಹಳ್ಳಿ ಗೇಟ್ ಮುಂತಾದ ಕಡೆ ರಸ್ತೆ ಬದಿ ಅಂಗಡಿಗಳಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಮಣ್ಣಿನ ಗಣೇಶ ಮೂರ್ತಿಗಳಿಗೆ ಸ್ಥಳಾವಕಾಶ ಕಲ್ಪಿಸಬೇಕಿದೆ.
ಅಧಿಕಾರಿಗಳ ಕಣ್ಣು ತಪ್ಪಿಸಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಕೆಲವರು ತೊಡಗಿದ್ದಾರೆ. ರಾಜ್ಯದಲ್ಲಿ ಪಿಒಪಿ ಗಣಪತಿ ತಯಾರಿಕೆಗೆ ನಿಷೇಧವಿದ್ದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಭಾಗದ ಹಳ್ಳಿಗಳಲ್ಲಿ ಹೇಳುವವರಿಲ್ಲ ಕೇಳುವರಿಲ್ಲ ಎಂಬಂತಾಗಿದೆ. ಸಾರ್ವಜನಿಕರು ಸ್ವತಃ ದೂರು ನೀಡಿದರೂ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ನೆಪಕ್ಕೆ ದಾಳಿ ನಡೆಸಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಟಿ.ಎಂ.ಅಶ್ವತ್‌ನಾರಾಯಣ ಗಣೇಶ ಮೂರ್ತಿ ಕಲಾಕಾರ, ತಾವರೆಕೆರೆ
ಮಣ್ಣಿನಿಂದ ವಿವಿಧ ಬಗೆಯ ಕಲಾಕೃತಿಯ ಮೂರ್ತಿಗಳನ್ನು ತಯಾರು ಮಾಡಲಾಗಿದೆ. ಆದರೆ ಪಿಒಪಿ ಮೂರ್ತಿಗಳಿಂದ ನಮಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ವಹಿಸಬೇಕು. ಎಲ್ಲರಿಗೂ ಒಂದೇ ನ್ಯಾಯ ದೊರಕಿಸಿಕೊಡಬೇಕು. ಈ ಬಾರಿಯ ಹಬ್ಬ ಪರಿಸರ ಸ್ನೇಹಿಯಾಗಿ ಮಾಡಲು ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ. ನಮ್ಮಲ್ಲಿ ಮಣ್ಣಿನ ಗಣಪಗಳು 500 ರಿಂದ 25 ಸಾವಿರ ರೂಪಾಯಿವರೆಗೆ ದೊರೆಯಲಿವೆ.ನಾಗರಾಜಪ್ಪ, ನಂದಗುಡಿ ವ್ಯಾಪಾರಸ್ಥ