

ಸಾಗರ: ಸಾಗರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಲಾಲ್‌ಬಹದ್ದೂರ್ ಕಾಲೇಜಿನ ದೇವರಾಜ ಅರಸು ರಂಗಮಂದಿರದಲ್ಲಿ ಮಲೆನಾಡು ಸ್ವದೇಶಿ ಕಲಾ ಮತ್ತು ಸಾಂಸ್ಕೃತಿಕ ಪ್ರೇರಣಾ ಟ್ರಸ್ಟ್ ಆಯೋಜಿಸಿದ್ದ ಮಲೆನಾಡು ಫ್ಯಾಶನ್ ಮೇಳದಲ್ಲಿ ಸಾಗರದ ನಿಶಾ ಭಟ್ ಮಿಸ್ ಮಲೆನಾಡು ಮತ್ತು ಅಕ್ಷಯ್ ಹೆಗಡೆ ಮಿಸ್ಟರ್ ಮಲೆನಾಡು ಕಿರೀಟ ಧರಿಸಿದರು.
ಮಿಸ್ ಮಲೆನಾಡು ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಶ್ರೇಯಾ, ಕೆ.ರಜ್ಹಿಯಾ ಹಂಚಿಕೊಂಡರು. ಮಿಸೆಸ್ ಮಲೆನಾಡು ಬಿರುದನ್ನು ಮೊನಾಲಿಸಾ ಡಿಸೋಜ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಸ್ವಾತಿಕಾ ಶೆಟ್ಟಿ ತಮ್ಮದಾಗಿಸಿಕೊಂಡರು.
ಪುಟ್ಟ ಮಕ್ಕಳಿಂದ ಹಿಡಿದು ಮಹಿಳೆ, ಪುರುಷರವರೆಗೆ ಫ್ಯಾಷನ್ ಮೇಳ ನಡೆಯಿತು. ಬಾಗಲಕೋಟೆಯ ಇಳಕಲ್ ಸೀರೆಯಿಂದ ಹಿಡಿದು ಮಲೆನಾಡಿನ ಚೌಕಳಿ ಸೀರೆಯವರೆಗೆ ನಾರಿಯರು ಸಾಂಪ್ರದಾಯಿಕ ಸೀರೆಗಳನ್ನು ಉಟ್ಟು ದೇಶಿಯ ಕಲೆೆಗಳನ್ನು ಪ್ರದರ್ಶಿಸಿದರು. ವಿವಿಧ ವಿಭಾಗಗಳಲ್ಲಿ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು ವಿಶೇಷವೆನಿಸಿತ್ತು. ಸ್ಪರ್ಧಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆ ಮತ್ತು ಆಭರಣಗಳನ್ನು ಧರಿಸಿ ಭಾಗವಹಿಸಿದ್ದಲ್ಲದೆ, ಮಲೆನಾಡಿನ ವಿಶೇಷತೆಯನ್ನು ಕೂಡ ಬಿಂಬಿಸಿದರು.
ರ‌್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ನಗರಸಭಾ ಅಧ್ಯಕ್ಷೆ ಮಧುರಾ ಶಿವಾನಂದ್ ಸೌಂದರ್ಯ ಸ್ಪರ್ಧೆ ಉದ್ಘಾಟಿಸಿದರು. ತೀರ್ಪುಗಾರರಾದ ರೇಷ್ಮಾ ಫರ್ನಾಂಡಿಸ್ ಮಾತನಾಡಿ, ಸಾಗರದಲ್ಲಿ ಇದೇ ಮೊದಲಬಾರಿಗೆ ಸಾಂಪ್ರದಾಯಿಕ ಫ್ಯಾಷನ್ ಮೇಳ ನಡೆದಿದೆ. ನಮ್ಮ ಪ್ರದೇಶದ ಜನರ ಉತ್ಸಾಹ ನನಗೆ ಸಂತಸ ತಂದಿದೆ. ಮಕ್ಕಳಲ್ಲಿ ಎಲ್ಲ ಕಲೆಗಳು ಮತ್ತು ವಿಚಾರಗಳನ್ನು ತಿಳಿದುಕೊಳ್ಳುವ ಮನೋಪ್ರವೃತ್ತಿ ಬೆಳೆಸಬೇಕು ಎಂದರು.
ಗಾಯಕಿ ಪಿ.ಜಿ.ಸಹನಾ, ಕಲಾವಿದೆ ಮೇಧಿನಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಮಿಸ್ ಇಂಡಿಯಾ ಬ್ಯೂಟಿ ಪೇಜೆಂಟ್ ಪ್ರಶಸ್ತಿ ಪುರಸ್ಕೃತರಾಗಿರುವ ಹೊಸನಗರದ ಮಿಸ್ ಸೀಮಾ ಕಿರಣ್ ಸೆರಾವೋ ಅವರನ್ನು ಸನ್ಮಾನಿಸಲಾಯಿತು.