ನಿವ್ವಳ ಲಾಭ ಷೇರುದಾರರಿಗೆ ಹಂಚಿಕೆ

1721544882320 --000002
Published on

ಲಾಭ ಹೆಚ್ಚಳದ ಗುರಿ ಈಡೇರಿದೆ ಪಟೇಲ್ ಶಿವಕುಮಾರ್ ಹೇಳಿಕೆ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಭೆ
ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ನಗರದ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2023-24ನೇ ಸಾಲಿನಲ್ಲಿ ಗಳಿಸಿರುವ 83.03 ಲಕ್ಷ ರೂ. ನಿವ್ವಳ ಲಾಭವನ್ನು ಸೊಸೈಟಿ ಮತ್ತು ಸಿಬ್ಬಂದಿಯ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಯೋಗಿಸುವುದರೊಂದಿಗೆ, ಷೇರುದಾರರಿಗೂ ಹಂಚಿಕೆ ಮಾಡಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್ ಹೇಳಿದರು.
ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಸೊಸೈಟಿಯ 23ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಸೊಸೈಟಿಯಲ್ಲಿ 1734 ಸದಸ್ಯರಿದ್ದು, 79.46 ಲಕ್ಷ ರೂ. ಷೇರು ಬಂಡವಾಳ ಹೊಂದಿದೆ. 13.50 ಕೋಟಿ ರೂ. ಠೇವಣಿ ಇದ್ದು, 5.68 ಕೋಟಿ ರೂ. ಗಳನ್ನು ವಿವಿಧೆಡೆ ಹೂಡಿಕೆ ಮಾಡಲಾಗಿದೆ. 20.51 ಕೋಟಿ ರೂ. ದುಡಿಯುವ ಬಂಡವಾಳವಿದೆ. 12.36 ಕೋಟಿ ರೂ. ಸಾಲ ಮತ್ತು ಮುಂಗಡ ನೀಡಲಾಗಿದ್ದು, ಲಾಭ ಹೆಚ್ಚಳದ ಗುರಿ ಈಡೇರಿದೆ ಎಂದರು.
ಗ್ರಾಹಕರು ಈ ಸಾಲಿನಲ್ಲಿ 59 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. ಭದ್ರತಾ ಕಪಾಟು, ಚಿನ್ನಾಭರಣದ ಮೇಲೆ ಸಾಲ, ಉಳಿತಾಯ ಖಾತೆ, ಠೇವಣಿ, ಸಾಲ ವಸೂಲಿ ಉತ್ತಮವಾಗಿದೆ. 2015-16ರಿಂದ ನಿರಂತರವಾಗಿ ಆಡಿಟ್‌ನಲ್ಲಿ ಎ.ವರ್ಗ ಪಡೆದಿದ್ದು, ಷೇರುದಾರರಿಗೆ ಆಗಿನಿಂದಲೂ ಶೇ.20 ಡಿವಿಡೆಂಡ್ ಕೊಡಲಾಗುತ್ತಿದೆ. ನಗರದ ಬಿವಿಕೆ ಬಡಾವಣೆಯಲ್ಲಿ ನಿವೇಶನ ಯಾವಕಟ್ಟಡ ನಿರ್ಮಿಸಬೇಕೆಂಬುದರ ಕುರಿತು ಸದಸ್ಯರು ಸಲಹೆ ನೀಡಬೇಕೆಂದ ಅವರು, ಸೊಸೈಟಿ ಬೆಳ್ಳಿಹಬ್ಬದ ಸಮಾರಂಭಕ್ಕೆ ಹಣ ತೆಗೆದಿರಿಸಲಾಗುತ್ತಿದೆ ಎಂದರು.
2023-24 ಹಾಗೂ 2024-25ನೇ ಸಾಲಿನ ಆಯ-ವ್ಯಯ ಕ್ಕೆ ಸಭೆ ಅನುಮೋದನೆ ನೀಡಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ಷೇರುದಾರರ ಮಕ್ಕಳನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಸುರೇಶ್ ಸಿದ್ದಾಪುರ, ನಿರ್ದೇಶಕರಾದ ಎಸ್.ಪರಮೇಶ್ವರಪ್ಪ, ಎಸ್.ವಿ.ನಾಗರಾಜ್, ಕೆಇಬಿ ಷಣ್ಮುಖಪ್ಪ, ಬಿ.ಎಂ.ಕರಿಬಸವಯ್ಯ, ಸಿ.ಚಂದ್ರಪ್ಪ, ಜಯಶ್ರೀ, ಆರ್.ಶೈಲಜಾ ಇದ್ದರು. ವ್ಯವಸ್ಥಾಪಕಿ ಕುಸುಮಾ ಜವಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net