ನಿವೇಶನ,ವಸತಿ ಸೌಲಭ್ಯ ಕಲ್ಪಿಸಲು ಒತ್ತಾಯ -ಹರಿಹರದಲ್ಲಿ ತಮಟೆ ಚಳವಳಿ ನಾಡಿದ್ದು

IMG-20240103-WA0024_20240103072440056.jpg
Published on

ದಾವಣಗೆರೆ: ಹರಿಹರ ತಾಲೂಕಿನ ಭಾನುವಳ್ಳಿ ಹಾಗೂ ಕಡ್ಲೆಗೊಂದಿ ಗ್ರಾಮಗಳ ದಲಿತ ಹಾಗೂ ಹಿಂದುಳಿದ ಸಮುದಾಯಗಳಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹರಿಹರದಲ್ಲಿ ಜ.5ರಂದು ತಮಟೆ ಚಳವಳಿ ನಡೆಸಲಾಗುವುದು ಎಂದು ಗ್ರಾಮಸ್ಥರು ಹೇಳಿದರು.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಹರಿಹರದ ಪಕ್ಕೀರಸ್ವಾಮಿ ಮಠದಿಂದ ತಾಲೂಕು ಕಚೇರಿವರೆಗೆ ತಮಟೆ ಚಳವಳಿ ನಡೆಸಿ ತಾಲೂಕು ಮತ್ತು ಜಿಲ್ಲಾಡಳಿತದ ಗಮನ ಸೆಳೆಯಲಾಗುವುದು ಎಂದು ಭಾನುವಳ್ಳಿಯ ಲಕ್ಷ್ಮಪ್ಪ ಹಾಗೂ ಸಾಕಮ್ಮ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡೂ ಗ್ರಾಮಗಳಲ್ಲಿ ಅನೇಕ ಕುಟುಂಬಗಳು ಚಿಕ್ಕಗುಡಿಸಲು ಹಾಗೂ ನೆರಿಕೆ ಮನೆಗಳಲ್ಲಿ ಯಾವುದೇ ಮೂಲಸೌಲಭ್ಯಗಳಿಲ್ಲದೆ ವಾಸಿಸುತ್ತಿವೆ. ಕಳೆದೊಂದು ವಾರದಿಂದ ಹರಿಹರ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ತಾಲೂಕು ಹಾಗೂ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ದೂರಿದರು.

ಭಾನುವಳ್ಳಿ ಗ್ರಾಮದ ಸರ್ವೇ ನಂ. 239/22ರ 2.27 ಎಕರೆ ಎ.ಕೆ.ಸರ್ವೀಸ್ ಇನಾಂ ಜಮೀನಿನಲ್ಲಿ ಹಾಗೂ ಕಡ್ಲೆಗೊಂದಿ ಸರ್ವೆ ನಂ. 37ರ 8 ಎಕರೆ ಸರ್ಕಾರಿ ಜಮೀನಿನಲ್ಲಿ ನಿರ್ವಸತಿಗರಿಗೆ ನಿವೇಶನ ನೀಡುವ ಮೂಲಕ ವಸತಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಜೈತುನ್‌ಬಿ, ಮುಬಿನಾ, ಸುಶೀಲಮ್ಮ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net