

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕು ಅರದೇಶನಹಳ್ಳಿ ಗ್ರಾಮದ ಸುಮಾರು 30 ದಲಿತ ನಿರ್ಗತಿಕರ ಕುಟುಂಬ ನಿವೇಶನ ಕೋರಿ ಜಿಲ್ಲಾಡಳಿತ ವಿರುದ್ಧ ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿದೆ. ಇದೇ ಗ್ರಾಮದ ಸರ್ಕಾರಿ ಜಾಗದಲ್ಲಿ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡಿರುವ ಪ್ರತಿಭಟನಕಾರರು ಜಿಲ್ಲಾಡಳಿತ ನಮಗೆ ನಿವೇಶನ ಮಂಜೂರು ಮಾಡದಿದ್ದರೆ ಇದೇ ಜಾಗದಲ್ಲಿ ವಾಸ್ತವ್ಯ ಹೂಡುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾಗಿ ಅಥವಾ ಜಿಲ್ಲಾಡಳಿತ ಯಾವುದೇ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದ್ದು, ಪ್ರತಿಭನಕಾರರ ಅಕ್ರೋಶ ಮತ್ತಷ್ಟು ಭುಗಿಲಿದ್ದಿದೆ.
ಕರುಣೆ ತೋರಿಸಲಿ: ಕಳೆದ 50 ವರ್ಷಕ್ಕೂ ಹಿಂದಿನಿಂದಲೂ ಈ ಗ್ರಾಮದಲ್ಲಿ ವಾಸಮಾಡುತ್ತಿದ್ದೇವೆ, ನಮ್ಮ ತಾತ್ಕಾಲಿಕ ಮನೆಗಳು ಮಳೆಯಿಂದ ಹಾನಿಯಾಗಿವೆ ಮತ್ತಷ್ಟು ಮನೆಗಳು ಬಿದ್ದುಹೋಗಿವೆ, ಇರುವ ಸಣ್ಣ ನಿವೇಶನಗಳಲ್ಲೇ ದೊಡ್ಡ ಸಂಸಾರ ಸಾಕುವ ಹೊಣೆ ಇದೆ, ನಿರ್ಗತಿಕರಾದ ನಾವು ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ, ನಮಗೆ ಯಾರೂ ದಿಕ್ಕಿಲ್ಲ, ಸೂಕ್ತ ನಿವೇಶನ ದೊರೆಕಿಸಿಕೊಟ್ಟರೆ ನಾವೋ ಹೇಗೋ ಬದುಕಿನ ಬಂಡಿ ಎಳೆಯುತ್ತೇವೆ ಈ ಬಗ್ಗೆ ಅಧಿಕಾರಿಗಳು ಕರುಣೆ ತೋರಿಸಬೇಕಿದೆ ಎಂದು ಸ್ಥಳೀಯ ಕುಮಾರ್ ಒತ್ತಾಯಿಸಿದ್ದಾರೆ.
ತಾತ್ಕಾಲಿಕ ಗುಡಿಸಲು: ಸರ್ಕಾರಿ ಜಮೀನಿನಲ್ಲಿ ಕಡ್ಡಿಗಳು, ಸೀರೆ, ತೆಂಗಿನಗರಿಳಿಂದ ಗುಡಿಸಲು ನಿರ್ಮಾಣ ಮಾಡಿಕೊಂಡಿರುವ ಪ್ರತಿಭಟನಕಾರರು ಇದೇ ಸ್ಥಳದ ಮುಂದೆ ಧರಣಿ ಕುಳಿತಿದ್ದಾರೆ, ಇದೇ ಗುಡಿಸಲುಗಳ ಮುಂದೆ ಬೇಕು ನಿವೇಶನ ಬೇಕು, ಅಧಿಕಾರಿಗಳೇ ಧಿಕ್ಕಾರ ಎಂದು ೋಷಣೆ ಕೂಗುತ್ತಿದ್ದಾರೆ. ನಮಗೆ ನಿವೇಶನ ನೀಡಲು ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸುತ್ತಿದ್ದು, ಹಿಡಿಶಾಪ ಹಾಕುತ್ತಿದ್ದಾರೆ.
ಸರ್ಕಾರಿ ಭೂಮಿ ಇಲ್ಲ!: ಗ್ರಾಮದ ಸರ್ವೇ.ನಂ 69 ರಲ್ಲಿ 38 ಗುಂಟೆ ಸರ್ಕಾರಿ ಜಾಗ ಬಿಟ್ಟು ಬೇರೆ ಕಡೆಯೂ ಸರ್ಕಾರಿ ಭೂಮಿ ಇಲ್ಲ ಎನ್ನುತ್ತಿದ್ದು, ಇದೇ ಸರ್ಕಾರಿ ಭೂಮಿಯನ್ನು ನಿರ್ಗತಿಕರಿಗೆ ನಿವೇಶನವನ್ನಾಗಿ ನೀಡುವಂತೆ ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ ಎನ್ನಲಾಗಿದೆ. ಅಲ್ಲದೆ ಇರುವ 38 ಗುಂಟೆಯನ್ನು ಸ್ಮಶಾನ ಜಾಗ ಎಂದು ಗುರುತಿಸಿ ಸ್ಮಶಾನ ಮಾಡಲು ಹೊರಟಿದ್ದಾರೆ. ಬದುಕಲೇ ನೆಲೆ ಇಲ್ಲ ಸ್ಮಶಾನಕ್ಕೆ ಒಲವು ತೋರಿಸುತ್ತಿದ್ದಾರೆ ಎಂಬುದು ಪ್ರತಿಭಟನಕಾರರ ಆಕ್ರೋಶವಾಗಿದೆ.
ಗುಡಿಸಲು ಹಾಕಿದ್ದ ಜಾಗದಲ್ಲಿ ರಾತ್ರೋರಾತ್ರಿ ಗ್ರಾಮದ ಕೆಲವರು ನಮ್ಮನ್ನ ಓಡಿಸಬೇಕು ಎಂಬ ಉದ್ದೇಶದಿಂದ ಬೆಂಕಿ ಕೂಡ ಹಚ್ಚಿದ್ದಾರೆ ಎಂದು ಸ್ಥಳೀಯ ನಿವಾಸಿ ಶಿವಮ್ಮ ಆರೋಪಿಸಿದ್ದಾರೆ. ಪ್ರಾಣಹೋದ್ರು ಈ ಜಾಗವನ್ನ ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂಬು ಪಟ್ಟು ಹಿಡಿದಿದ್ದಾರೆ.
ಅರಣ್ಯರೋದನ: ಕಳೆದೊಂದು ವಾರದಿಂದ ಮಕ್ಕಳೊಂದಿಗೆ ಹಿರಿಯರು ಸೇರಿ ಮೂವತ್ತು ಕುಟುಂಬದ ಸದಸ್ಯರು ನಿವೇನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಯಾರೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ ಎನ್ನಲಾಗಿದೆ, ನಿರ್ಗತಿಕರ ಕೂಗು ಅರಣ್ಯರೋದನವಾಗಿದೆ ಎಂದು ಪ್ರತಿಭಟನಕಾರರು ಅಳಲುತೋಡಿಕೊಂಡಿದ್ದಾರೆ.