ನಿವೇಶನ ಹಂಚಿಕೆ ಮಾಡುವಲ್ಲಿ ಜಿಲ್ಲಾಡಳಿತ ವಿಳಂಬ ಧೋರಣೆ

site protest
ಪರಿಶಿಷ್ಟರಿಗೆ ನಿವೇಶನ ಹಂಚಿಕೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳಗೋಡು ಗ್ರಾಮಸ್ಥರು ನಾಡಕಚೇರಿ ಎದುರು ಪ್ರತಿಭಟನೆ ನಡೆಸಿದರು. ನವರಾಜ್, ಹೊನ್ನಪ್ಪ, ಗಣೇಶ್, ಕುಮಾರ್, ಪೂರ್ಣೇಶ್ ಇತರರಿದ್ದರು.
Published on

ಆಲ್ದೂರು: ಬೆಳಗೋಡು ಗ್ರಾಮದ ಪರಿಶಿಷ ್ಟಜಾತಿಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಪಟ್ಟಣದ ನಾಡಕಚೇರಿ ಎದುರು ಬೆಳಗೋಡು ಗ್ರಾಮದ ಪರಿಶಿಷ್ಟರು ಸೋಮವಾರ ಧರಣಿ ನಡೆಸಿದರು.

ಗ್ರಾಮದಲ್ಲಿ 45 ಎಸ್ಸಿ ಕುಟುಂಬಗಳು ವಾಸವಾಗಿವೆ. ಮನೆ ಕಟ್ಟಲು ಸಮತಟ್ಟಾದ ಜಾಗವಿಲ್ಲದೆ ಗುಡ್ಡಗಾಡು ಪ್ರದೇಶದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದೇವೆ. ಮಳೆಗಾಲದಲ್ಲಿ ಮನೆಗಳು ಕುಸಿಯುವ ಭೀತಿ ಇದೆ ಎಂದು ದೊಡ್ಡಮಾಗರವಳ್ಳಿ ಗ್ರಾಪಂ ಸದಸ್ಯ ಪೂರ್ಣೇಶ್ ಗಮನಕ್ಕೆ ತಂದರು.
ಗ್ರಾಮಕ್ಕೆ ಮೂಲ ಸೌಕರ್ಯಗಳೂ ಇಲ್ಲ. ದೊಡ್ಡಮಾಗರವಳ್ಳಿ ಗ್ರಾಮದ ಸರ್ವೇ ನಂ.197ರಲ್ಲಿ ನೂರಾರು ಎಕರೆ ಸರ್ಕಾರಿ ಜಾಗವಿದೆ. ಅಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡಲು ಅರಣ್ಯ ಇಲಾಖೆಯವರು ತೊಂದರೆ ನೀಡುತ್ತಿದ್ದಾರೆ. ಅಕ್ಕಪಕ್ಕದ ಕಾಫಿ ತೋಟಗಳ ಮಾಲೀಕರು ತೊಂದರೆ ನೀಡಿ ನಮ್ಮ ಮೇಲೆ ಕೇಸು ದಾಖಲು ಮಾಡಿದ್ದಾರೆ. ಗೇಟ್‌ಗಳನ್ನು ನಿರ್ಮಿಸಿಕೊಂಡು ನಮಗೆ ದಾರಿ ಬಿಡದೆ ತೊಂದರೆ ಕೊಡುತ್ತಿದ್ದಾರೆ. 2 ಕಿ.ಮೀ ಸುತ್ತಿಕೊಂಡು ನಮ್ಮ ಊರಿಗೆ ಹೋಗಬೇಕು. ಹಾಗಾಗಿ ಸಂಬಂಧಿಸಿದ ಇಲಾಖೆಯವರು ತಕ್ಷಣ ಸ್ಥಳ ಪರಿಶೀಲಿಸಿ ನಮಗೆ ನಿವೇಶನ ಹಾಗೂ ಮೂಲ ಸೌಲಭ್ಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ನಾಡ ಕಚೇರಿ ಎದುರು ಧರಣಿ ಕುಳಿತರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜ್, ಗೌರವಾಧ್ಯಕ್ಷ ಹೊನ್ನಪ್ಪ, ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಗಣೇಶ್ ಕಠಾರದಹಳ್ಳಿ, ವಸ್ತಾರೆ ಹೋಬಳಿ ಜನಜಾಗೃತಿ ವೇದಿಕೆ ಅಧ್ಯಕ್ಷ ಕುಮಾರ್ ಹೆಡದಾಳ್, ಜಿಲ್ಲಾ ಸಂಘಟನಾ ಸಂಚಾಲಕ ಯೋಗೇಶ್ ತುಡಕೂರು, ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್, ಸುಂದರ್, ಸಂದೀಪ್, ಪೂರ್ಣೇಶ್, ದುಗ್ಗಯ್ಯ, ಹಾಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net