ನಿವೇಶನ ಹಂಚಿಕೆ ಜಾಗ ಗುರ್ತಿಸಿ

20 nrp 1 web
Published on

ಎನ್.ಆರ್.ಪುರ: ನಿವೇಶನ ಹಂಚಿಕೆಯಾಗದೆ ಇಪ್ಪತ್ತೈದು ವರ್ಷ ಕಳೆದಿದೆ. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿರುವ 800 ಕ್ಕೂ ಅಧಿಕ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೆ ಜಾಗ ಗುರ್ತಿಸಿಕೊಡಿ ಎಂದು ತಹಸೀಲ್ದಾರ್ ವಿಶ್ವನಾಥ್ ಅವರನ್ನು ಮುತ್ತಿನಕೊಪ್ಪ ಜನ ಜಾಗೃತಿ ವೇದಿಕೆ ಅಧ್ಯಕ್ಷ ಸಿ.ಮನೋಹರ್ ಒತ್ತಾಯಿಸಿದರು. ಮುತ್ತಿನಕೊಪ್ಪದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇರುವ ಜಾಗವೆಲ್ಲ ನಮ್ಮದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳತ್ತಾರೆ. ಜನಸಂಖ್ಯೆಗನುಗುಣವಾಗಿ ಜಾಗ ಬೇಕಾಗುತ್ತದೆ. ಎಲ್ಲ ಜಾಗ ಅರಣ್ಯದ್ದಾದರೆ ಜನರಿಗೆ ಎಲ್ಲಿಂದ ಜಾಗ ನೀಡುತ್ತೀರಾ ಎಂದು ಪ್ರಶ್ನಿಸಿದರು.

2004 ಅರಣ್ಯ ಹಕ್ಕು ಕಾಯ್ದೆ ಪಾರಂಪರಿಕ ಅರಣ್ಯ ಹಕ್ಕು ಸಮಿತಿಯಲ್ಲಿ ಎಸ್ಸಿ, ಎಸ್ಟಿ ಜನರಿಗೆ 5 ವರ್ಷ, ಇತರೆಯವರಿಗೆ 75 ವರ್ಷದ ದಾಖಲೆಗಳನ್ನು ಕೇಳಲಾಗಿತ್ತು. 75 ವರ್ಷದ ದಾಖಲಾತಿ ಒದಗಿಸಿದರೂ ಇದೂವರೆಗೂ ಭೂ ದಾಖಲೆ ಕೊಟ್ಟಿಲ್ಲ. ಕಸ್ತೂರಿ ರಂಗನ್ ವರದಿ, ಬಫರ್ ಜೋನ್, ಹುಲಿ ಯೋಜನೆ ಹೀಗೆ ಅನೇಕ ಯೋಜನೆಗಳು ಜಾರಿ ಆಗುತ್ತಲೇ ಇವೆ. ಕಾಡು ಪ್ರಾಣಿಗಳ ಜತೆಗೇ ಜೀವಿಸುತ್ತಿದ್ದೇವೆ. ನಾವೂ ಅರಣ್ಯ ರಕ್ಷಕರಿದ್ದಂತೆ. ರೈತರ ಸಹಕಾರವಿಲ್ಲದೆ ಅರಣ್ಯ ರಕ್ಷಿಸಲು ಸಾಧ್ಯವಿಲ್ಲ. ಜನರಿಗೆ ಮೊದಲು ನಿವೇಶನ ಕೊಡಿಸಿ, ಆಗ ನಿಮ್ಮ ಗ್ರಾಮ ಭೇಟಿ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದರು.

ಜನವಸತಿ ಪ್ರದೇಶ ಬಿಟ್ಟು ಇನ್ಯಾವುದೇ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಯಾವುದೇ ಯೋಜನೆಗಳು ಬೇಕಾದರೂ ಜಾರಿಯಾಗಲಿ. ರೈತರಿಗೆ ಶಾಶ್ವತವಾದ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ, ಸ್ಮಶಾನ ಜಾಗಕ್ಕಾಗಿ 20 ಗುಂಟೆ ಜಾಗವೇ ಸಿಗುತ್ತಿಲ್ಲ. ನಿವೇಶನ ರಹಿತರಿಗೆ ನಿವೇಶನ ಹಂಚಲು ಅರಣ್ಯ ಹಾಗೂ ಕಂದಾಯ ಇಲಾಖೆ ಎರಡೂ ಇಲಾಖೆ ಜಂಟಿ ಸರ್ವೆ ಮಾಡಿಸಲು ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಜನವಸತಿ ಇಲ್ಲದ, ಕೃಷಿ ಮಾಡದ ಪ್ರದೇಶಕ್ಕೆ ಮಾತ್ರ ಸೆಕ್ಷನ್ 17ಆಗಲು ಅನುಮತಿ ನೀಡಲಾಗುತ್ತದೆ. ಆದರೆ ಜನವಸತಿ ಪ್ರದೇಶವಿರುವ ಜಾಗ, ಶಾಲಾ ಕಟ್ಟಡಗಳು, ಸರ್ಕಾರಿ ಕಟ್ಟಡಗಳಿರುವ ಪ್ರದೇಶಕ್ಕೆ ಅನುಮತಿ ನೀಡುವುದಿಲ್ಲ. ಜಂಟಿ ಸರ್ವೆ ಮಾಡಿಯೇ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net