ನಿವೇಶನ ಸ್ವಚ್ಛತೆ ನಿರ್ವಹಣೆ ಹೊಣೆ ಮಾಲೀಕರಿಗೆ; ‘ಕಂದಾಯದ ಜತೆಗೆ ಕರಾರು’, ನೋಟಿಸ್‌ಗೂ ಬಗ್ಗದಿದ್ದಲ್ಲಿ ದಂಡ ಪ್ರಯೋಗ

24CBP1b____02
Published on

ಚಿಕ್ಕಬಳ್ಳಾಪುರ : ಕಸದ ತಾಣವಾಗಿ, ಗಿಡ-ಗಂಟಿಗಳು ಬೆಳೆದು ಹುಳು-ಹುಪ್ಪಟೆಗಳ ಆವಾಸ ಸ್ಥಾನವಾಗಿರುವ ನಿವೇಶನಗಳಲ್ಲಿ ಸ್ವಚ್ಛತೆ ನಿರ್ವಹಣೆಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಹೊಸ ಅಸ ಪ್ರಯೋಗಿಸಲು ಮುಂದಾಗಿವೆ. ಸ್ವಚ್ಛತೆ ನಿರ್ವಹಣೆಯ ಜವಾಬ್ದಾರಿಯನ್ನು ನಿವೇಶನ ಮಾಲೀಕರಿಗೇ ನೀಡಲು ಚಿಂತಿಸಿದ್ದು, ‘ಕಂದಾಯದ ಜತೆಗೆ ಕರಾರು’ ಸೂತ್ರ ಸಿದ್ಧಗೊಳಿಸಿವೆ.

ಒಣ ಮತ್ತು ಹಸಿ ಕಸ ಪ್ರತ್ಯೇಕ ಸಂಗ್ರಹ, ವೈಜ್ಞಾನಿಕ ವಿಲೇವಾರಿ ಹಾಗೂ ನಿರ್ವಹಣೆ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ನಿವಾಸಿಗಳು, ಅಂಗಡಿ, ಹೋಟೆಲ್ ಮಾಲೀಕರು ರಾಜಾರೋಷವಾಗಿ ಕಸ ಹಾಕುತ್ತಿದ್ದಾರೆ. ಆದರೆ ನಿವೇಶನಗಳ ನಿರ್ವಹಣೆಗೆ ಮಾಲೀಕರು ನಿರ್ಲಕ್ಷ್ಯ ವಹಿಸಿರುವುದರಿಂದ ಅವರಿಗೇ ಸ್ವಚ್ಛತೆ ನಿರ್ವಹಣೆ ಹೊಣೆ ಹೊರಿಸಲಾಗುತ್ತಿದೆ.

ನಿವೇಶನಗಳಲ್ಲಿನ ತ್ಯಾಜ್ಯ ವಿಲೇವಾರಿಯಾಗದಿರುವುದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿರುವುದರಿಂದ ಎಚ್ಚೆತ್ತ ಸ್ಥಳೀಯ ಆಡಳಿತಗಳು, ಪ್ರಸಕ್ತ ಸಾಲಿನ ಕಂದಾಯ ವಸೂಲಿ ವೇಳೆ ಸಂಬಂಧಪಟ್ಟ ನಿವೇಶನ ಮಾಲೀಕರಿಂದ ತೆರಿಗೆ ಕಟ್ಟಿಸಿಕೊಳ್ಳುವುದರ ಜತೆಗೆ ಸ್ವಚ್ಛತೆ ನಿರ್ವಹಣೆ ಜವಾಬ್ದಾರಿ ಹೊರುವ ಕರಾರು ಪತ್ರ ಮತ್ತು ನಿವೇಶನದ ಹೊಸ ಫೋಟೋ ಪಡೆಯಲು ಚಿಂತಿಸಿವೆ. ಒಂದೊಮ್ಮೆ ಆದೇಶಕ್ಕೆ ಅನುಗುಣವಾಗಿ ನಡೆದುಕೊಳ್ಳದಿದ್ದಲ್ಲಿ ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಸೇರಿ ಇತರ ದಾಖಲೆ ಮತ್ತು ಸೇವೆ ನೀಡುವುದನ್ನು ತಡೆ ಹಿಡಿಯಲು ನಿರ್ಧರಿಸಲಾಗಿದೆ.

ನೋಟಿಸ್ : ಮನೆಗಳಿಂದ ಒಣ ಮತ್ತು ಹಸಿ ಕಸ ಸಂಗ್ರಹ, ಬೀದಿ ಮತ್ತು ಚರಂಡಿಗಳಲ್ಲಿ ಸ್ವಚ್ಛತೆ ನಡೆಯುತ್ತಿದೆ. ನಿವೇಶನಗಳಲ್ಲಿನ ಕಸದ ರಾಶಿ ವಿಲೇವಾರಿಯಾಗದಿರುವುದು ಹಾಗೂ ವಾರ್ಡ್‌ನ ಸ್ವಚ್ಛತೆ ನಿರ್ವಹಣೆಗೂ ಕೆಟ್ಟ ಹೆಸರು ಬರುತ್ತಿರುವುದು ಸದಸ್ಯರನ್ನು ಕೆರಳಿಸಿದ್ದು, ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡದ ಮಾಲೀಕರಿಗೆ ನೋಟಿಸ್ ತಲುಪಿಸುವ ಮೂಲಕ ಎಚ್ಚರಿಸುವಂತೆ ಒತ್ತಾಯಿಸಿದ್ದಾರೆ.ಈ ಹಿನ್ನೆಲೆಯಲ್ಲಿ ನಗರಸಭೆ ಕಂದಾಯದ ಜತೆಗೆ ಸ್ವಚ್ಛತೆ ನಿರ್ವಹಣೆ ಕರಾರಿಗೆ ಮುಂದಾಗಿವೆ. ನೋಟಿಸ್ ನೀಡಿದರೂ ಮಾಲೀಕರು ಬಗ್ಗದಿದ್ದಲ್ಲಿ ದಂಡ ವಿಧಿಸಿ, ಸ್ವಚ್ಛತೆ ನಿರ್ವಹಣೆ ವೆಚ್ಚಕ್ಕೆ ಈ ಹಣ ಬಳಸಿಕೊಳ್ಳಬೇಕೆಂಬ ಸಲಹೆಗಳೂ ಕೇಳಿ ಬಂದಿದ್ದು, ನಗರಸಭೆ ಪ್ರಸಕ್ತ ಸಾಲಿನಿಂದಲೇ ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಭೂಮಿಗೆ ಬಂಗಾರದ ಬೆಲೆ : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವುದರಿಂದ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆಯಿದೆ, 31 ವಾರ್ಡ್‌ಗಳನ್ನು ಹೊಂದಿರುವ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಭೂಮಿ ಪರಿವರ್ತನೆ ಮತ್ತು ನಿವೇಶನಗಳ ವಿಂಗಡಣೆ ಮತ್ತು ಹೈಟೆಕ್ ಕಟ್ಟಡಗಳ ನಿರ್ಮಾಣ ಜೋರಾಗಿ ನಡೆಯುತ್ತಿರುವ ನಡುವೆ ಹಲವರು ನಿವೇಶನಗಳನ್ನು ಖರೀದಿಸಿ ಹಾಗೆಯೇ ಬಿಟ್ಟಿದ್ದು, ಜನವಸತಿ ಪ್ರದೇಶದಲ್ಲಿರುವ ನಿವೇಶನಗಳಲ್ಲಿ ಕಸದ ರಾಶಿ ತುಂಬಿ ತುಳುತ್ತಿದೆ.

ಕ್ರಿಮಿ-ಕೀಟಗಳ ತಾಣ : ನಿವೇಶನಗಳಲ್ಲಿ ತ್ಯಾಜ್ಯ ಗಿಡಗಳು ಬೆಳೆದಿದ್ದರೂ ಕಾಲ ಕಾಲಕ್ಕೆ ತೆರವುಗೊಳಿಸುತ್ತಿಲ್ಲ, ಇದರಿಂದಾಗಿ ದಟ್ಟವಾಗಿ ಗಿಡ-ಗಂಟಿಗಳು ಬೆಳೆದು ಇಲಿ, ಹೆಗ್ಗಣ, ಹಾವು, ಕ್ರಿಮಿಕೀಟಗಳ ತಾಣವಾಗಿ ಪರಿವರ್ತನೆಯಾಗಿವೆ. ಜತೆಗೆ ಸುತ್ತಲಿನ ಕೆಲ ಜನರು ತ್ಯಾಜ್ಯ ಸುರಿಯುವ ಮೂಲಕ ಮತ್ತಷ್ಟು ಗಬ್ಬೆಬ್ಬಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಹಾಕುವುದಕ್ಕೆ ದಂಡ ವಿಧಿಸುತ್ತಿರುವ ಸ್ಥಳೀಯ ಆಡಳಿತದ ಅಧಿಕಾರಿಗಳು ಈ ವಿಚಾರದಲ್ಲಿ ಮಾತ್ರ ಮೌನವಾಗಿರುವುದೇ ನಗರದ ಅಂದ ಹದಗೆಡಲು ಪ್ರಮುಖ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net