ನಿವೇಶನ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Slum
Published on

ಚಿತ್ರದುರ್ಗ: ನಗರ ವ್ಯಾಪ್ತಿಯ ನಿವೇಶನ ರಹಿತ 400ಕ್ಕೂ ಅಧಿಕ ಕುಟುಂಬಗಳಿಗೆ ಸರ್ಕಾರಿ ಭೂಮಿ ಗುರುತಿಸಿ ಮಂಜೂರಾತಿ ಮಾಡಿಕೊಡಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಶಾಖೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಕೊಳಚೆ ಪ್ರದೇಶಗಳಲ್ಲಿ ಎಸ್ಸಿ, ಎಸ್ಟಿ, ಅಲೆಮಾರಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕಳೆದ 20 ವರ್ಷದಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು, ದುಡಿಯುವ ಹಣದಲ್ಲಿ ಶೇ 50ರಷ್ಟು ಬಾಡಿಗೆಗೆ ವ್ಯಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಈ ಕುರಿತು 3 ವರ್ಷದಿಂದ ಪ್ರತಿಭಟನೆ ಮಾಡಿ, ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸರ್ಕಾರಿ ಗೋಮಾಳ ಜಾಗದಲ್ಲಾದರೂ ನಿವೇಶನ ರಹಿತರಿಗೆ ಮಂಜೂರಾತಿ ಮಾಡಿಕೊಡಬೇಕು. ಸಾಲ ಮಾಡಿಯಾದರೂ ಮನೆಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ, ನಿರಂತರ ಹೋರಾಟಕ್ಕೂ ಸಿದ್ಧ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.

ಶಾಖೆಯ ಅಧ್ಯಕ್ಷ ಎಂ.ಮಹೇಶ್, ಪದಾಧಿಕಾರಿಗಳಾದ ಟಿ.ಮಂಜಣ್ಣ, ಕೆ.ರಾಜಣ್ಣ, ಮಾಲತಿ, ಭಾಗ್ಯಮ್ಮ, ಮಂಜುನಾಥ, ವರಲಕ್ಷ್ಮಿ, ರೇಷ್ಮಾಬಾನು, ಹೀನಾಕೌಸರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net