

ಕಡೂರು: ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಸತಿ ರಹಿತರ ಸಮೀಕ್ಷೆ ಕಾರ್ಯದಲ್ಲಿ ನಿಗದಿತ ಗುರಿ ತಲುಪಲು ಎರಡೂ ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ಪಟ್ಟಣದ ಪುರಸಭೆ ಕನಕ ಸಭಾಂಗಣದಲ್ಲಿ ಕಡೂರು-ಬೀರೂರು ಪುರಸಭೆ ವ್ಯಾಪ್ತಿಯ ವಸತಿ ಮತ್ತು ನಿವೇಶನ ರಹಿತರ ಪಟ್ಟಿಯ ಸಮೀಕ್ಷೆ ಪ್ರಗತಿ ಕುರಿತು ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಡೂರು ವ್ಯಾಪ್ತಿಯಲ್ಲಿ ದೊಡ್ಡ ಪುರಸಭೆಯಾಗಿ ಬೆಳೆದಿದೆ. ಇಲ್ಲಿ ವಸತಿ ಮತ್ತು ನಿವೇಶನ ರಹಿತರ ಸಂಖ್ಯೆ ನಿಖರವಾಗಿ ಗುರುತಿಸಬೇಕು. ಇಲ್ಲಿಯ ತನಕ 9 ವಾರ್ಡ್‌ಗಳ ಪೈಕಿ ಕೇವಲ ಸ್ಲಂ ನಿವಾಸದ 18 ಸ್ಥಳಗಳನ್ನು ಗುರುತಿಸಲಾಗಿದೆ. ನಿವೇಶನ ರಹಿತರು ಮತ್ತು ವಸತಿ ರಹಿತರು 1,482 ಅರ್ಜಿ ಸಲ್ಲಿಸಿದ್ದಾರೆ. ಬೀರೂರು ಪುರಸಭೆಯಲ್ಲಿ 1,530 ಅರ್ಜಿಗಳಿಗೆ ಸೀಮಿತವಾಗಿದೆ ಎಂದರೆ ಬಹುಶಃ ಅಧಿಕಾರಿಗಳು ಪೂರ್ಣ ಸಕ್ರಿಯರಾಗಬೇಕಾದ ಅಗತ್ಯವಿದೆ ಎಂದರು.
ಬೀರೂರು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಗೋಪಾಲ್ ಜಾದವ್, ಕಡೂರು ಬೀರೂರು ಪುರಸಭೆ ಮುಖ್ಯಾಧಿಕಾರಿಗಳಾದ ಕೆ.ಎಸ್.ಮಂಜುನಾಥ್, ಜಿ.ಪ್ರಕಾಶ್, ಪುರಸಭೆ ಸದಸ್ಯರಾದ ಮರುಗುದ್ದಿ ಮೋಹನ್, ಇಕ್ಬಾಲ್, ಶಶಿಧರ್ ಮತ್ತಿತರಿದ್ದರು.