

ಚಿಂತಾಮಣಿ/ಚಿಕ್ಕಬಳ್ಳಾಪುರ: ಜನರ ಬಳಿಗೆ ಇಡಿ ಆಡಳಿತ ಯಂತ್ರಾಂಗವೇ ಬಂದು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದು ಇದನ್ನು ಅರ್ಹರು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸಲಹೆ ನೀಡಿದರು.
ಚಿಂತಾಮಣಿ ತಾಲೂಕಿನ ಆನೂರು ಗ್ರಾಪಂ ವ್ಯಾಪ್ತಿಯ ದೊಡ್ಡಬೊಮ್ಮನಹಳ್ಳಿಯಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಗುರುವಾರ ಕೈಗೊಂಡಿದ್ದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿವೇಶನ ರಹಿತರಿಗಾಗಿ ಜಿಲ್ಲೆಯಲ್ಲಿ 1,100 ಎಕರೆ ಜಮೀನು ಮಂಜೂರಾಗಿದ್ದು, 45 ಸಾವಿರ ಅರ್ಹ ಕುಟುಂಬಗಳಿಗೆ ನಿವೇಶನವನ್ನು ನೀಡಲಾಗುತ್ತದೆ. ಇದರಲ್ಲಿ ಚಿಂತಾಮಣಿ ತಾಲೂಕಿಗೆ 66 ಎಕರೆ ಜಮೀನು ಗುರುತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕರೊನಾ ಸಕ್ರಿಯ ಪ್ರಕರಣಗಳು ಶೂನ್ಯ. ಆದರೂ ನಿರ್ಲಕ್ಷೃ ತೋರದೇ ಪ್ರತಿಯೊಬ್ಬರು ಮಾರ್ಗಸೂಚಿ ನಿಯಮಗಳನ್ನು ಪಾಲಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಗ್ರಾಮ ವಾಸ್ತವ್ಯ ಒಳ್ಳೆಯ ಕಾರ್ಯಕ್ರಮ. ಮುಂಬರುವ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಕುಗ್ರಾಮಗಳಲ್ಲಿ ಆಡಳಿತ ಯಂತ್ರಾಂಗ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕು. ಇದರ ನಡುವೆ ಜಿಲ್ಲಾಡಳಿತವು ಗ್ರಾಪಂ ವ್ಯಾಪ್ತಿಯಲ್ಲಿ ಆಯ್ಕೆಯು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆನೂರು ಗ್ರಾಪಂ ಅಧ್ಯಕ್ಷ ಸತೀಶ್, ಉಪಾಧ್ಯಕ್ಷೆ ನಾಗಮಣಿ, ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ಕ್ಷಯರೋಗ ನಿರ್ಮೂಲನಾಧಿಕಾರಿ ಯೆಲ್ಲಾ ರಮೇಶ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಸ್ವಾತಿ, ಇಒ ಹರ್ಷವರ್ಧನ್ ಮತ್ತಿತರರು ಇದ್ದರು.
ಕಾಲನಿಯಲ್ಲಿ ಡಿಸಿಗೆ ಬಾಗಿನ: ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಊರಿಗೆ ಬಂದ ಡಿಸಿ, ಶಾಸಕರನ್ನು ಸ್ಥಳೀಯ ಮಹಿಳೆಯರು ಆರತಿ ಬೆಳಗಿ, ಸ್ವಾಗತಿಸಿದರು. ಗಿಡ್ಡ ಹಸುಗಳ ಜೋಡಿ, ನಿಸರ್ಗ ಕಲಾ ತಂಡದ ಡೊಳ್ಳು ಕುಣಿತ, ಜೈ ಭೀಮ್ ಕಲಾ ತಂಡದ ತಮಟೆ ವಾದನದೊಂದಿಗೆ ಮೆರವಣಿಗೆ ನಡೆಯಿತು. ಇನ್ನು ಕಾಲನಿಯಲ್ಲಿನ ಮಹಿಳೆಯರ ಮನೆಗೆ ಡಿಸಿ ಹೋಗಿ, ಮುತ್ತೈದೆ ಬಾಗಿನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಗ್ರಾಮ ವಾಸ್ತವ್ಯಕ್ಕೆ ಇಲ್ಲಿನ ಶ್ರೀ ವೀರಭದ್ರಸ್ವಾಮಿ ಮತ್ತು ಭದ್ರಕಾಳಿ ಅಮ್ಮನವರ ದೇವರಿಗೆ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಲಾಯಿತು.
ಸ್ಥಳದಲ್ಲಿ ಅಹವಾಲು ಸ್ವೀಕಾರ: ಆನೂರು ಗ್ರಾಪಂ ವ್ಯಾಪ್ತಿಯಲ್ಲಿ ಜಾತಿ ಮತ್ತು ಪ್ರಮಾಣ ಪತ್ರ, ವಸತಿ ಆಯ್ಕೆ, ವೃದ್ದಾಪ್ಯ ವೇತನ, 28 ಪೌತಿಖಾತೆ ಸೇರಿ ಸರ್ಕಾರದ ವಿವಿಧ ಯೋಜನೆಯಡಿ ಆಯ್ಕೆಯಾದ 4,914 ಲಾನುಭವಿಗಳಿಗೆ ಮಂಜೂರಾತಿ ಪತ್ರ ಮತ್ತು ಕಾರ್ಯಾದೇಶ ಪತ್ರ, 6,192 ಜನರ ಪೈಕಿ 4,700 ಮಂದಿಗೆ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸಲಾಯಿತು. ಗ್ರಾಮದ ಕಾಲನಿಗಳಿಗೆ ಭೇಟಿ ನೀಡಿ, ಬೀದಿ ದೀಪ, ಸ್ವಚ್ಛತೆ, ನೀರಿನ ವ್ಯವಸ್ಥೆ ಸೇರಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಾಯಿತು. ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು.
ಗಮನ ಸೆಳೆದ ಪ್ರದರ್ಶನ: ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಪುಂಗನೂರು ತಳಿ ಹಸುಗಳು ಹಾಗೂ ಡಾಪರ್ ಸುವರ್ಣ ಕುರಿ, ಬಂಡೂರಿ ತಳಿಯ ಕುರಿ ಹಾಗೂ ಯಲಗ ತಳಿಯ ಕುರಿಗಳು ಪ್ರದರ್ಶನ, ಕೃಷಿ ಹಾಗೂ ರೇಷ್ಮೆ ಇಲಾಖೆಯ ವಸ್ತು ಪ್ರದರ್ಶನ, ಉಚಿತ ಆಯುಷ್ ಮತ್ತು ಆಯುರ್ವೇದ ಚಿಕಿತ್ಸಾ ಶಿಬಿರ, ಅರಣ್ಯ ಇಲಾಖೆಯ ವಿವಿಧ ರೀತಿಯ ಸಸಿಗಳ ಪ್ರದರ್ಶನ, ತೋಟಗಾರಿಕೆ ಇಲಾಖೆಯ ತರಕಾರಿ ಹಾಗೂ ಗುಲಾಬಿ ಹೂವುಗಳ ಪ್ರದರ್ಶನ, ಏಕದಳ ಮೇವಿನ ಬೆಳೆಗಳು, ಬಹುವಾರ್ಷಿಕ ಮೇವಿನ ಹುಲ್ಲುಗಳನ್ನು ಪ್ರದರ್ಶನ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಾಗೃತಿ ಮಳಿಗೆ ಗಮನ ಸೆಳೆಯಿತು.
ಎರಡು ಎಕರೆ ಜಾಗ: ದೊಡ್ಡಬೊಮ್ಮನಹಳ್ಳಿಯ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಮಂಜೂರಾದ 2 ಎಕರೆ ಜಮೀನನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.