

ಮುಂಡರಗಿ: ನಿವೇಶನ ರಹಿತರಿಗೆ ಆಶ್ರಯ ಮನೆ ಹಂಚಿಕೆ ಮಾಡುವುದರ ಜೊತೆಗೆ ವಾಜಪೇಯಿ ನಗರ ವಸತಿ ಯೋಜನೆಯ ಫಲಾನುಭವಿಗಳಿಗೆ ಕಂತಿನ ಹಣ ಬಿಡುಗಡೆ ಮಾಡಬೇಕು ಎಂದು ಪಟ್ಟಣದ ಸಾರ್ವಜನಿಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ 2 ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ 25 ಎಕರೆ ಜಮೀನು ಖರೀದಿಸಿ ನಾಲ್ಕು ವರ್ಷ ಕಳೆದರೂ ಫಲಾನುಭವಿಗಳಿಗೆ ನಿವೇಶನ ನೀಡಿಲ್ಲ. ವಾಜಪೇಯಿ ನಗರ ವಸತಿ ಯೋಜನೆಯಡಿ ಹಲವರು ಮನೆ ನಿರ್ವಿುಸಿಕೊಳ್ಳುತ್ತಿದ್ದು ಎರಡ್ಮೂರು ವರ್ಷ ಕಳೆದರೂ ಕಂತಿನ ಹಣ ಬಿಡುಗಡೆಯಾಗಿಲ್ಲ ಎಂದರು.
ಪುರಸಭೆ ಮುಖ್ಯಾಧಿಕಾರಿ ಎನ್.ಕೆ. ಡೊಂಬರ, ಸಿಪಿಐ ಸುಧೀರ ಬೆಂಕಿ, ಉಪ ತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಪ್ರತಿಭಟನೆಕಾರರೊಂದಿಗೆ ರ್ಚಚಿಸಿದರು. ಮುಖ್ಯಾಧಿಕಾರಿ ಎನ್.ಕೆ. ಡೊಂಬರ್ ಮಾತನಾಡಿ, ‘ಶಾಸಕರ ಅಧ್ಯಕ್ಷತೆಯಲ್ಲಿ ಆಶ್ರಯ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಪುರಸಭೆ ಕಚೇರಿಯಿಂದ ಒಟ್ಟು 660 ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಂಚಿಕೆ ಕುರಿತು ಜಿಲ್ಲಾಧಿಕಾರಿಯವರ ಮೂಲಕ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಿಗಮದಿಂದ ನಿವೇಶನ ಹಂಚಿಕೆಯ ಹಕ್ಕುಪತ್ರ ಬಂದ ಕೂಡಲೇ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ ಎಂದರು.
ಒಂದೂವರೆ ತಿಂಗಳ ಒಳಗಾಗಿ ಕ್ರಮ ಕೈಗೊಳ್ಳದಿದ್ದರೆ ನಿವೇಶನ ರಹಿತರು ಕುಟುಂಬ ಸಮೇತ ಪುರಸಭೆ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಅಡಿವೆಪ್ಪ ಚಲವಾದಿ, ಎ.ವೈ. ನವಲಗುಂದ, ಸಂತೋಷ ಹಿರೇಮನಿ, ನಾಗರಾಜ ಹೊಂಬಳಗಟ್ಟಿ, ಚಂದ್ರು ಪೂಜಾರ, ಅಬುಬ್ಕರ್ ಚೌಥಾಯಿ, ಸುರೇಶ ಬಂಡಿವಡ್ಡರ, ಮಹ್ಮದ ರಫೀಕ್ ವಡ್ಡಟ್ಟಿ, ಸೋಮನಗೌಡ ಗೌಡರ, ವಿನೋದ ಭಜಂತ್ರಿ, ಮೇರಿಜಾನ್ ಪೂಜಾರ, ರಮೇಶ ಕಾತರಕಿ, ಮಂಜುನಾಥ ಡಂಬಳ, ಶಂಭವ್ವ ವಡ್ಡಟ್ಟಿ, ರೇಣವ್ವ ಸಂಗಾರ, ರೇಣವ್ವ ಹೂಗಾರ, ಸಾವಿತ್ರಿ ಕೋಟೆ, ಜನ್ನತ್ಬಿ ಜಾಲಗಾರ, ದಾಕ್ಷಾಯಿಣಿ ಹಡಪದ, ಖೈರುನಬಿ ಭಗವಾನ, ಅನಿತಾ ಕಮ್ಮಾರ ಇತರರು ಇದ್ದರು.