

ಯಳಂದೂರು: ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಚಿತವಾಗಿ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ತಾಲೂಕುಗಳಲ್ಲಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಈಗಾಗಲೇ ನಿವೇಶನಗಳನ್ನು ನೀಡಲಾಗಿದ್ದು, ಕೆಲವೆಡೆ ಕಟ್ಟಡ ಕಾಮಗಾರಿಗಳೇ ಮುಗಿದಿದೆ. ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಯಳಂದೂರು ತಾಲೂಕಿನಲ್ಲಿ ಇದುವರೆಗೆ ನಿವೇಶನ ನೀಡಿಲ್ಲ. ಹೀಗಾಗಿ, ಪತ್ರಿಕಾಗೋಷ್ಠಿ ನಡೆಸುವುದೂ ಸೇರಿದಂತೆ ಇತರ ಸಂಘದ ಕಾರ್ಯಚಟುವಟಿಕೆಗಳನ್ನು ನಡೆಸಲು ತೊಂದರೆಯಾಗುತ್ತಿದೆ. ಪಟ್ಟಣ ಪಂಚಾಯಿತಿ ಅಥವಾ ಕಂದಾಯ ಇಲಾಖೆಯ ವ್ಯಾಪ್ತಿಗೆ ಸೇರಿದ ಖಾಲಿ ಸರ್ಕಾರಿ ಜಾಗದಲ್ಲಿ 10 ಗುಂಟೆ ಜಮೀನು ನಮ್ಮ ಸಂಘಕ್ಕೆ ಮಂಜೂರು ಮಾಡಬೇಕು ಎಂದು ಸಂಘದ ಸದಸ್ಯರು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಖಾಲಿ ನಿವೇಶನವನ್ನು ಗುರುತಿಸಿ ಸಂಘಕ್ಕೆ ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್ ತಾಲೂಕು ಅಧ್ಯಕ್ಷ ಅಂಬಳೆ ವೀರಭದ್ರನಾಯಕ, ಪ್ರದಾನ ಕಾರ್ಯದರ್ಶಿ ಡಿ.ಪಿ. ಮಹೇಶ್, ವೈ.ಕೆ. ಮೋಳೆ ನಾಗರಾಜು, ಫೈರೋಜ್‌ಖಾನ್, ಪುರುಷೋತ್ತಮ್, ಸೈಯದ್ ಇರ್ಫಾನ್, ಮುಷರಫ್ ಸೇರಿದಂತೆ ಇತರರು ಇದ್ದರು.