

ಬೇಲೂರು: ಸೈನಿಕರು ದೇಶ ಸೇವೆಗಾಗಿ ತಮ್ಮ ಜೀವನ ಮತ್ತು ಜೀವವನ್ನೇ ಮುಡಿಪಾಗಿಟ್ಟು ಹೋರಾಡುತ್ತಾರೆ. ಯುದ್ಧಗಳಲ್ಲಿ ಸಾಕಷ್ಟು ಯೋಧರು ಹುತಾತ್ಮರಾಗುತ್ತಾರೆ. ಮತ್ತೆ ಕೆಲವರು ಗಾಯಾಳುಗಾಗಿ ಶಾಶ್ವತವಾಗಿ ಅಂಗವಿಕಲರಾಗುತ್ತಾರೆ ಎಂದು ನಿವೃತ್ತ ಸೈನಿಕ ಹಾಗೂ ವೈಡಿಡಿ ಕಾಲೇಜು ಉಪನ್ಯಾಸಕ ವೀರಭದ್ರಪ್ಪ ತಿಳಿಸಿದರು.
ಪಟ್ಟಣದ ಮಾತೃಶ್ರೀ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಯೋಧನಮನ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸೈನಿಕರು ದೇಶ ಸೇವೆಯಿಂದ ನಿವೃತ್ತಿಯ ನಂತರ ಆತ್ಮಸ್ಥೈರ್ಯದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಮಾತನಾಡಿ, ದೇಶದ ಭದ್ರತಾ ದೃಷ್ಟಿಯಿಂದ ದೇಶವನ್ನು ಹಗಲಿರುಳು ಮಳೆ, ಚಳಿ ಎನ್ನದೆ ಕಾಯುವ ಸೈನಿಕರು ಹಾಗೂ ಸರ್ಕಾರಿ ನೌಕರಿಯಿಂದ ನಿವೃತ್ತರಾಗಿ ಸಮಾಜಮುಖಿ ಕೆಲಸ ಮಾಡುತ್ತಿರುವವರನ್ನು ಅಭಿನಂದಿಸುವುದು ನನಗೆ ಸಿಕ್ಕ ಪುಣ್ಯದ ಕೆಲಸವಾಗಿದೆ. ಅಲ್ಲದೆ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದ ದೇಶದ ಸೈನಿಕರ ಬಗ್ಗೆ ಯಾರೂ ಹೆಚ್ಚು ಗಮನ ನೀಡಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ವ್ಯವಸ್ಥೆಗೆ ನೀಡಿದ ಬೆಂಬಲದಿಂದ ಬೇರೆ ರಾಷ್ಟ್ರಗಳು ನಮ್ಮ ಮೇಲೆ ಯುದ್ಧ್ದಕ್ಕೆ ಬರಲು ಹಿಂಜರಿಯುತ್ತಾರೆ. ಸೈನಿಕರಿಗೆ ಅಗತ್ಯ ಸೌಲಭ್ಯ ನೀಡಿ ಆತ್ಮ ವಿಶ್ವಾಸ ಮೂಡಿಸಿದ್ದಾರೆ ಎಂದು ಶ್ಲಾಘಿಸಿದರು.
ಚನ್ನಕೇಶವ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್, ಮಹಿಳಾಧ್ಯಕ್ಷೆ ಶೋಭಾ, ಕಸಾಪ ಅಧ್ಯಕ್ಷ ರಾಜೇಗೌಡ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾಗಭೂಷಣ್, ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದೇಗೌಡ, ನಿವೃತ್ತ ಪ್ರಾಂಶುಪಾಲ ಪ್ರೊ.ಜಯಣ್ಣಗೌಡ ಸೇರಿದಂತೆ ಇತರರಿದ್ದರು.