

ಹಾಸನ: ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಮರಳಿದ ಸಾಲಗಾಮೆ ನಿವಾಸಿ ಕೆ. ನಾಗರಾಜ್ ಅವರನ್ನು ನಗರದ ಡೈರಿ ವೃತ್ತದ ಬಳಿ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಕುಟುಂಬಸ್ಥರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿದರು.
ನಗರದ ಡೈರಿ ವೃತ್ತದಿಂದ ರೈಲ್ವೆ ನಿಲ್ದಾಣ, ಬಿ.ಎಂ. ರಸ್ತೆ, ಸಾಲಗಾಮೆ ರಸ್ತೆ ಮೂಲಕ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ನಾಗರಾಜ್ ಅವರನ್ನು ಕರೆತರಲಾಯಿತು. ಈ ವೇಳೆ ಕುಟುಂಬಸ್ಥರು ಹಾಗೂ ಅಭಿಮಾನಿಗಳು ನಿವೃತ್ತ ಸೈನಿಕ ನಾಗರಾಜ್ ಅವರಿಗೆ ಹೂ ಗುಚ್ಛ ನೀಡಿ, ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ನಿವೃತ್ತ ಯೋಧ ಕೆ. ನಾಗರಾಜ್ ಮಾತನಾಡಿ, ಕಳೆದ 24 ವರ್ಷಗಳಿಂದ ದೇಶ ಸೇವೆ ಮಾಡಿ ಮತ್ತೆ ಮರಳಿ ಸ್ವ ಗ್ರಾಮಕ್ಕೆ ಬಂದಿರುವುದು ಸಂತಸ ತಂದಿದೆ. ಸೇವಾ ಸಂದರ್ಭದಲ್ಲಿ ಕುಟುಂಬ ಸದಸ್ಯರ ಪ್ರೀತಿಯಿಂದ ದೂರವಿದ್ದ ನನಗೆ ಇದೀಗ ಎಲ್ಲರೂ ಅದ್ದೂರಿ ಸ್ವಾಗತ ಕೋರಿ, ಪ್ರೀತಿ ತೋರಿದ್ದಾರೆ. ನಾನು ಮಾಡಿದ ದೇಶ ಸೇವೆಗೆ ಅರ್ಥ ಕಲ್ಪಿಸಿದೆ ಎಂದರು.
ಪತ್ನಿ ಪವಿತ್ರಾ ಮಾತನಾಡಿ, ದೇಶ ಸೇವೆಗೆ ಹೋದವರು ಮತ್ತೆ ಬದುಕಿ ಬರುತ್ತಾರೆ ಎಂಬ ಯಾವುದೇ ನಿರೀಕ್ಷೆ ಇರುವುದಿಲ್ಲ. ಅದರ ನಡುವೆಯು ಎಲ್ಲವನ್ನೂ ಜಯಿಸಿ ಮತ್ತೆ ಮನೆಗೆ ಬಂದಿದ್ದು ಖುಷಿ ತಂದಿದೆ. ವಿವಾಹವಾಗಿ ಕೇವಲ ಎರಡೇ ವರ್ಷಕ್ಕೆ ದೇಶ ಸೇವೆಗೆ ತೆರಳಿದರು. ಮಕ್ಕಳು ಕೂಡ ತಂದೆಯ ಪ್ರೀತಿಯಿಂದ ವಂಚಿತರಾಗಿದ್ದರು. ಇದೀಗ ಯಶಸ್ವಿ ಸೇವೆಯೊಂದಿಗೆ ಮರಳಿ ಮನೆಗೆ ಬಂದಿದ್ದು ಕುಟುಂಬದ ಎಲ್ಲ ಸದಸ್ಯರಿಗೂ ಸಂತಸ ತಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು, ಮಾಜಿ ಸೈನಿಕರ ಸಂಘದ ಸದಸ್ಯರು ಭಾಗವಹಿಸಿ ಸ್ವಾಗತ ಕೋರಿದ್ದು ತುಂಬಾ ಸಂತಸದ ವಿಚಾರವಾಗಿದೆ, ಎಲ್ಲರಿಗೂ ಈ ಮೂಲಕ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಗೋವಿಂದೆ ಗೌಡ, ಕಾರ್ಯದರ್ಶಿ ಸಾಗರ್, ಖಜಾಂಚಿ ಬಾಲಕೃಷ್ಣ, ಸಹ ಕಾರ್ಯದರ್ಶಿ ಚಂದ್ರೇಗೌಡ, ನಿರ್ದೇಶಕ ಮಂಜೇಗೌಡ, ಕುಟುಂಬ ಸದಸ್ಯರಾದ ಶೂಜಿತ್, ಹೇಮಾ, ಇತರರು ಇದ್ದರು.