ನಿವೃತ್ತ ಸಿಬ್ಬಂದಿಗಳ ಕಷ್ಟ-ಸುಖಗಳಲ್ಲಿ ಪಾಲ್ಗೊಳ್ಳುವುದು ಇಲಾಖೆಯ ಜವಾಬ್ದಾರಿ: ಎಸ್ಪಿ

ನಿವೃತ್ತ ಸಿಬ್ಬಂದಿಗಳ ಕಷ್ಟ-ಸುಖಗಳಲ್ಲಿ ಪಾಲ್ಗೊಳ್ಳುವುದು ಇಲಾಖೆಯ ಜವಾಬ್ದಾರಿ: ಎಸ್ಪಿ
Published on

ಹಾಸನ: ಪೊಲೀಸ್ ಇಲಾಖೆಗೆ ಸೇರಿದ ವ್ಯಕ್ತಿ ನಿವೃತ್ತನಾದ ಬಳಿಕವೂ ಅಷ್ಟೇ ಮುಖ್ಯವಾಗಿರುತ್ತಾರೆ. ಅವರ ಕಷ್ಟ-ಸುಖಗಳಲ್ಲಿ ಪಾಲ್ಗೊಳ್ಳುವುದು ಇಲಾಖೆಯ ಜವಾಬ್ದಾರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಅವರು ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಲಾಖೆಯ ಮೇಲೆ ಸಾರ್ವಜನಿಕರ ಗೌರವವಿರುತ್ತದೆ. ಕರ್ತವ್ಯದ ಪ್ರತಿದಿನವೂ ಒತ್ತಡದಲ್ಲೇ ಕಳೆಯಬೇಕಾಗುತ್ತದೆ. ಸೇವೆಯಲ್ಲಿದ್ದಾಗ ನೌಕರರಿಗೆ ಎಷ್ಟು ಮಹತ್ವ ನೀಡುತ್ತೆವೆಯೋ ನಿವೃತ್ತಿ ಬಳಿಕವೂ ಅದೇ ಮನಸ್ಥಿತಿಯಿಂದ ಅವರನ್ನು ಕಾಣಬೇಕು. ಅದಕ್ಕಾಗಿಯೇ ನಿವೃತ್ತ ಪೊಲೀಸರಿಗಾಗಿ ವಿಶೇಷ ಯೋಜನೆಗಳನ್ನು ಸರ್ಕಾರ ರೂಪಿಸಿದೆ ಎಂದು ತಿಳಿಸಿದರು.
ಪೊಲೀಸ್ ಧ್ವಜ ದಿನಾಚರಣೆ ಮೂಲಕ ನಿವೃತ್ತರಿಗೆ ಗೌರವ ಸಲ್ಲಿಸಲಾಗುತ್ತಿದೆ. ಕಳೆದ ವರ್ಷ 9.29 ಲಕ್ಷ ರೂ. ಪೊಲೀಸ್ ಸ್ಟಿಕ್ಕರ್‌ಗಳ ಮಾರಾಟದಿಂದ ಸಂಗ್ರಹವಾಗಿತ್ತು. ಇದನ್ನು ನಿವೃತ್ತ ನೌಕರರ ಕಲ್ಯಾಣಕ್ಕಾಗಿ ಬಳಸಲಾಗಿದೆ. ವಿವಿಧ ಯೋಜನೆಯಡಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದಾಗಿದೆಯಾದರೂ ಜಿಲ್ಲೆಯ ನಿವೃತ್ತ ನೌಕರರು ನಿರ್ಲಕ್ಷೃ ತೋರುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರೀಸಾವೆ ವೃತ್ತದ ನಿವೃತ್ತ ಪೊಲೀಸ್ ನಿರೀಕ್ಷಕ ಕೆ. ಪ್ರಭಾಕರ್ ಅವರು ಮಾತನಾಡಿ, ರಾಜ್ಯದಲ್ಲಿ 1965 ಏ. 2 ರಂದು ಪೊಲೀಸ್ ಕಾಯ್ದೆ ಜಾರಿಗೆ ಬಂತು. ಆ ದಿನದಿಂದಲೇ ಪೊಲೀಸರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಪೊಲೀಸ್ ಧ್ವಜ ದಿನಾಚರಣೆ ಆರಂಭಿಸಲಾಯಿತು ಎಂದರು.
ಪೊಲೀಸ್ ಇಲಾಖೆಯಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಜಾಣ್ಮೆ, ತಾಳ್ಮೆ ಹಾಗು ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದರೆ ಉನ್ನತ ಅಧಿಕಾರಿಯಾಗುವ ಅವಕಾಶಗಳಿರುತ್ತವೆ. ಕಾನ್ಸಟೇಬಲ್ ಆಗಿ ಸೇವೆಗೆ ಸೇರಿದ ನಾನು ನಿವೃತ್ತಿ ಹೊತ್ತಿಗೆ ವೃತ್ತ ನಿರೀಕ್ಷನಾಗಿದ್ದೆ ಎಂದ ಅವರು, ಶ್ರೀನಿವಾಸಪುರ, ಚನ್ನಪಟ್ಟಣ, ಕೆ.ಆರ್.ಪೇಟೆ, ನಂಜನಗೂಡು ಠಾಣೆಯಲ್ಲಿ ತಾವು ಮಾಡಿದ ಕಾರ್ಯವೈಖರಿ ಕುರಿತು ಬೆಳಕು ಚೆಲ್ಲಿಸದರು. ಪೊಲೀಸ್ ಸಿಬ್ಬಂದಿಯಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಕೆ.ತಮ್ಮಯ್ಯ, ವೆಂಕಟೇಶ್ ನಾಯ್ಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net