

ಕಾರವಾರ/ಅಂಕೋಲಾ: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಮರಳಿದ ಇಬ್ಬರು ಯೋಧರಿಗೆ ತವರೂರಲ್ಲಿ ಅದ್ದೂರಿ ಸ್ವಾಗತ ದೊರೆಯಿತು.
ಕಾರವಾರದ ಚೆಂಡಿಯಾ ಭಜನಕೇರಿ ಮೂಲದ ದೀಪಕ ಪಾಂಡುರಂಗ ಗೌಡ ಭಾರತೀಯ ಸೇನೆಯಲ್ಲಿ 19 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಭಾನುವಾರ ತವರಿಗೆ ಮರಳಿದ್ದರು. ಪಶ್ಚಿಮ ಬಂಗಾಳ, ರಾಜಸ್ತಾನ ಸೇರಿ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು.
ತೋಡೂರಿನ ಗೋವಿಂದ ದೇವ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಕ ಮಂಡಳಿ, ಸಣ್ಣಮ್ಮ ಯುವಕ ಮಂಡಳಿ, ಮಹಾದೇವ ಯುವಕ ಮಂಡಳಿ ಭಜನಕೇರಿ, ಒಕ್ಕಲಕೇರಿ ಗೆಳೆಯರ ಬಳಗ, ರಾಯಲ್ಸ್ ಫ್ರೆಂಡ್ಸ್ ತೋಡೂರು, ಹಾಲಕ್ಕಿ ಬಳಗ, ಬಂಟದೇವ ಯುವಕ ಮಂಡಳಿಯಿಂದ ತೆರೆದ ಜೀಪ್ನಲ್ಲಿ ಮೆರವಣಿಗೆ ಮಾಡಿ, ಸನ್ಮಾನ ಮಾಡಲಾಯಿತು.
ಮುಖಂಡರಾದ ಶಿವರಾಮ ಗೌಡ, ವಿಷ್ಣು ಗೌಡ, ಲಿಂಗಾ ಗೌಡ, ಉದಯ ಗೌಡ, ಕಾಂತ ಗೌಡ, ವಸಂತ ಗೌಡ, ಪಾಂಡುರಂಗ ಗೌಡ, ಪ್ರಶಾಂತ ನಾಯ್ಕ ಹಾಜರಿದ್ದರು.
ಅಂಕೋಲಾದಲ್ಲಿ: ದೇಶದ ವಿವಿಧೆಡೆ 17 ವರ್ಷ ಕರ್ತವ್ಯ ನಿರ್ವಹಿಸಿ ಮರಳಿದ ಅಂಕೋಲಾ ಬೊಬ್ರುವಾಡದ ಗಣೇಶ ಮೋಹನ ನಾಯ್ಕ ಅವರನ್ನು ಭಾನುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಅಂಕೋಲಾದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸ್ವಾಗತಿಸಿದರು. ಬೊಬ್ರುವಾಡ ಊರಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನದಲ್ಲಿ ಸನ್ಮಾನ ಮಾಡಲಾಯಿತು.