ನಿವೃತ್ತ ಪೊಲೀಸ್ ಅಧಿಕಾರಿಯ ಕೃಷಿ ಪ್ರೀತಿ

Published on

ಗುಂಡ್ಲುಪೇಟೆ: ನಿವೃತ್ತಿ ನಂತರ ವಿಶ್ರಾಂತ ಜೀವನ ನಡೆಸಲು ಮುಂದಾಗುತ್ತಿದ್ದ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಪತ್ನಿಯೊಂದಿಗೆ ಪ್ರಗತಿಪರ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ತಾಲೂಕಿನ ಕಗ್ಗಳದಹುಂಡಿ ನಿವಾಸಿ ಗುರುಸ್ವಾಮಿ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ 9 ವರ್ಷಗಳ ಹಿಂದೆ ನಿವೃತ್ತಿ ಹೊಂದಿದರು. ಮೊದಲಿನಿಂದಲೂ ಜಮೀನಿನಲ್ಲಿ ನೆಲೆಸಿದ್ದ ಇವರು ಪತ್ನಿ ಸೌಭಾಗ್ಯ ಜತೆಗೂಡಿ ತಮ್ಮ 8 ಎಕರೆ ಜಮೀನಿನಲ್ಲಿ ನಾನಾ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಕೃಷಿ ಪ್ರೇಮ ಮೆರೆಯುತ್ತಲೇ ಬಂದಿದ್ದಾರೆ. ಇವರೊಂದಿಗೆ ಸೇವೆಯಲ್ಲಿದ್ದ ಸಹೋದ್ಯೋಗಿಗಳು ನಿವೃತ್ತಿಯ ನಂತರ ಮೈಸೂರು ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಂತೆಯೇ ಗುರುಸ್ವಾಮಿ ಅವರ ಪುತ್ರ ಮತ್ತು ಪುತ್ರಿಯೂ ಬೆಂಗಳೂರಿನಲ್ಲಿ ನೆಲೆಸಿದ್ದು, ದಂಪತಿ ಮಾತ್ರ ತಮ್ಮ ಜಮೀನಿನಲ್ಲೇ ಉಳಿದುಕೊಂಡು ಕೃಷಿ ಕಾಯಕ ಮುಂದುವರಿಸಿದ್ದಾರೆ.

ಚಾಮರಾಗನಗರ-ಗುಂಡ್ಲುಪೇಟೆ ರಸ್ತೆ ಬದಿಯಲ್ಲಿರುವ ತಮ್ಮ 8 ಎಕರೆ ಜಮೀನಿಗೆ ಹೆಚ್ಚು ಬೇಡಿಕೆಯಿದ್ದರೂ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡದೆ ಇಳಿ ವಯಸ್ಸಿನಲ್ಲಿಯೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಮೀನಲ್ಲಿ 2 ಕೊಳವೆ ಬಾವಿ ಕೊರೆಸಿದರಾದರೂ ನದಿ ಮೂಲದಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಬರುವ ಮೊದಲು ಇವುಗಳಲ್ಲಿ ನೀರಿನ ಲಭ್ಯತೆ ತುಂಬಾ ಕಡಿಮೆಯಾಗಿತ್ತು. ಒಂದರಲ್ಲಿ ನೀರು ಸಂಪೂರ್ಣ ಬತ್ತಿಹೋಗಿದ್ದರಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದಂತಾಗಿತ್ತು. ಇಂತಹ ಸಂದರ್ಭದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದರು. ಆಗ ನೆಟ್ಟಿದ್ದ 50 ತೆಂಗಿನ ಮರಗಳು, 1 ಹಲಸು, 3 ಮಾವು ಹಾಗೂ ದಾಳಿಂಬೆ, ಸಪೋಟಾ ಹಾಗೂ ಹುಣಿಸೆ ಮರಗಳು ಈಗ ಫಲ ನೀಡುತ್ತಿವೆ. ಸದ್ಯ ಎರಡೂ ಬಾವಿಗಳಲ್ಲಿಯೂ ಸಮೃದ್ಧವಾಗಿ ನೀರು ದೊರಕುತ್ತಿದ್ದು 2 ಎಕರೆ ಪ್ರದೇಶದಲ್ಲಿ ನೇಂದ್ರ ಬಾಳೆ, 2 ಎಕರೆ ಏಲಕ್ಕಿ ಬಾಳೆ, ಒಂದು ಎಕರೆ ಈರುಳ್ಳಿ ಬೆಳೆದಿದ್ದು ಎರಡು ಎಕರೆಯಲ್ಲಿ ಇತ್ತೀಚೆಗೆ ಆಲೂಗಡ್ಡೆ ಬಿತ್ತನೆ ಮಾಡಿಸಿದ್ದಾರೆ. ಹಿಂದಿನಿಂದಲೂ ಕೃಷಿಯೊಂದಿಗೆ ನಾಲ್ಕು ಹಸುಗಳನ್ನು ಸಾಕಿ ಹಾಲು ಮಾರಾಟ ಮಾಡುತ್ತಿದ್ದ ಗುರುಸ್ವಾಮಿ ದಂಪತಿ ಇತ್ತೀಚೆಗೆ ಇವುಗಳನ್ನು ಮಾರಾಟ ಮಾಡಿದ್ದಾರೆ. ಕಾರ್ಮಿಕರ ಕೊರತೆಯಿಂದ ದೊಡ್ಡ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗದಿದ್ದರೂ ಗಂಡ ಹೆಂಡತಿಯೇ ತಮ್ಮ ಜಮೀನಿನ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಈರುಳ್ಳಿ, ಬಾಳೆ ಬಂಪರ್ ಕಳೆದ ಬಾರಿ ಒಂದೂವರೆ ಎಕರೆಯಲ್ಲಿ 150 ಕ್ವಿಂಟಲ್‌ನಷ್ಟು ಸಣ್ಣ ಈರುಳ್ಳಿ ಬೆಳೆದಿದ್ದರು. ಆ ಮೂಲಕ ಅತಿ ಹೆಚ್ಚು ಈರುಳ್ಳಿ ಉತ್ಪಾದನೆ ಬೆಳೆದಿದ್ದರಿಂದ ಇತರ ರೈತರು ನಾಚಿಕೊಳ್ಳುವಂತಾಗಿತ್ತು. ಬಾಳೆ ಬೆಳೆಯೂ 13-14 ಕೆಜಿವರೆಗೆ ತೂಕ ಬರುತ್ತಿದೆ. ಕಳೆದ ಬಾರಿ ಎಕರೆಗೆ 14 ಕ್ವಿಂಟಲ್ ಸೂರ್ಯಕಾಂತಿ ಇಳುವರಿ ಬಂದಿದ್ದರಿಂದ ಒಳ್ಳೆಯ ಲಾಭ ದೊರಕಿದೆ. ಇದೇ ಮೊದಲ ಬಾರಿಗೆ ಆಲೂಗಡ್ಡೆ ಬಿತ್ತನೆ ಮಾಡಿದ್ದು, ಉತ್ತಮ ಬೆಳೆ ಬೆಳೆಯುವ ವಿಶ್ವಾಸದಲ್ಲಿದ್ದಾರೆ.

ಸಾವಿರಾರು ಅಡಿ ಕೊರೆಸಿದ ಕೊಳವೆ ಬಾವಿಗಳಲ್ಲಿ ಬೇಸಾಯಕ್ಕೆ ಅಗತ್ಯವಾದ ನೀರಿನ ಲಭ್ಯತೆ ಕಡಿಮೆಯಾದಾಗ ಸ್ವಲ್ಪದಿನ ಬೆಂಗಳೂರಿಗೆ ಹೋಗಿ ನೆಲೆಸಿದ್ದರೂ ಅಲ್ಲಿನ ವಾತಾವರಣ ನನಗೆ ಹಾಗೂ ಪತ್ನಿಗೆ ಇಷ್ಟವಾಗಲಿಲ್ಲ. ಅಲ್ಲದೆ ಪಿತ್ರಾರ್ಜಿತವಾಗಿ ಬಂದ ಭೂಮಿಯನ್ನು ಪಾಳುಬಿಡಲು ಮನಸ್ಸಾಗದೆ ಊರಿಗೆ ಮರಳಿ ಬಾಳೆ, ಈರುಳ್ಳಿ, ಸೂರ್ಯಕಾಂತಿ ಬೆಳೆದಿದ್ದು, ಎಲ್ಲವೂ ಉತ್ತಮ ಇಳುವರಿ ಬರುತ್ತಿವೆ. ಸಾವಯವ ಕೃಷಿ ಮಾಡಲು ತುಂಬ ಆಸಕ್ತಿಯಿದ್ದು ಹಂತಹಂತವಾಗಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಕೆ ಕಡಿಮೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜೀವಾಮೃತ ಸೇರಿದಂತೆ ಸಾವಯವ ಗೊಬ್ಬರ ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ. ಗುರುಸ್ವಾಮಿ ನಿವೃತ್ತ ಸಹಾಯಕ ಸಬ್ ಇನ್‌ಸ್ಪೆಪೆಕ್ಟರ್, ಕಗ್ಗಳದ ಹುಂಡಿ ಯುವಜನತೆಯೇ ಕೃಷಿ ಚಟುವಟಿಕೆಯಿಂದ ದೂರಾಗುತ್ತಿರುವ ಸಂದರ್ಭದಲ್ಲಿ ನಿವೃತ್ತಿ ನಂತರವೂ ಪೊಲೀಸ್ ಅಧಿಕಾರಿಯೊಬ್ಬರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಇತರರಿಗೆ ಮಾದರಿಯಾಗಿದೆ. ಇವರ ಆಸಕ್ತಿ ಹಾಗೂ ಉತ್ಸಾಹ ನೋಡಿದರೆ ಯುವಕರೂ ನಾಚಿಕೊಳ್ಳುವಂತಿದೆ. ಮಹದೇವನಾಯ್ಕ ತೆರಕಣಂಬಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net