

ಕಲಬುರಗಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿರುವ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಅನುದಾನವನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರಗಳಲ್ಲಿ ಅನ್ಯ ಉದ್ದೇಶಕ್ಕೆ ಬಳಸಿರುವುದನ್ನು ನಿವೃತ್ತ ನ್ಯಾಯಮೂರ್ತಿಗಳ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಅಖಿಲ ಕರ್ನಾಟಕ ದಲಿತ ಸೇನೆ ಅಧ್ಯಕ್ಷ ದತ್ತಾತ್ರೇಯ ಕುಡಕಿ ಒತ್ತಾಯಿಸಿದರು.
ಕಳೆದ ಹತ್ತು ವರ್ಷದಲ್ಲಿ ೨.೯೪ ಲಕ್ಷ ಕೋಟಿ ರೂ. ಎಸ್‌ಸಿಪಿ ಮತ್ತು ಟಿಎಸ್‌ಪಿ ಮೀಸಲು ಅನುದಾನವನ್ನು ಎಲ್ಲ ಪಕ್ಷಗಳ ಸರ್ಕಾರದಲ್ಲಿ ಬೇರೆ ಉದ್ದೇಶಗಳಿಗೆ ಬಳಸಿರುವುದು ಖಂಡನೀಯ. ಕೂಡಲೇ ಇದನ್ನು ತನಿಖೆ ನಡೆಸಿ, ನ್ಯಾಯ ಒದಗಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಅನುದಾನ ಹಣ ಬಳಸಿರುವುದು ಸರಿಯಲ್ಲ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಭೋವಿ ಅಭಿವೃದ್ಧಿ ನಿಗಮದಲ್ಲಿ ರೂ.೮೭ ಕೋಟಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಲ್ಲಿ ೪೩೮ ಕೋಟಿ ರೂ., ಪ್ರಸ್ತುತ ಸರ್ಕಾರದಲ್ಲಿ ಎಸ್‌ಸಿಪಿ, ಟಿಎಸ್‌ಪಿಯ ಯೋಜನೆಯ ೨೦೨೩-೨೪ನೇ ಮತ್ತು ೨೦೨೪-೨೫ನೇ ಸಾಲಿನಲ್ಲಿ ೨೫,೩೯೦ ಕೋಟಿ ರೂ. ಗ್ಯಾರಂಟಿ ಯೋಜನೆಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪರಿಶಿಷ್ಟ ಪಂಗಡ ನಿಗಮದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ೧೮೭ ಕೋಟಿ ರೂ. ಹಗರಣ ನಡೆಸಲಾಗಿದೆ ಎಂದರು.
೨೦೧೪-೧೫ರಿAದ ಇದುವರೆಗೆ ೨.೯೪ ಲಕ್ಷ ಕೋಟಿ ರೂ. ನೀಡಿದ್ದು, ಪರಿಶಿಷ್ಟ ಜಾತಿ, ಪಂಗಡಕ್ಕೆ ಬಳಕೆಯಾದ ಅನುದಾನವೇಷ್ಟು? ಅನ್ಯ ಉದ್ದೇಶಕ್ಕೆ ಬಳಸಿದ ಹಣ ಎಷ್ಟು ಎಂಬುದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಚನ್ನವೀರ ಕಾಳಕಿಂಗೆ, ಸಂಜೀವಕುಮಾರ ಕಾಂಬಳೆ, ಶಿವಕುಮಾರ ತೋಟ್ನಳ್ಳಿ, ವಿಠ್ಠಲ್ ಕೋಣೆಕರ ಇತರರಿದ್ದರು.