

ಚಾಮರಾಜನಗರ: ಕಷ್ಟಪಟ್ಟು ದುಡಿದು ನಿವೃತ್ತರಾದ ಬಳಿಕ ನೌಕರರ ಪಿಂಚಣಿ ಯೋಜನೆಯಡಿ(ಇಪಿಎಸ್) ಪಿಂಚಣಿ ಪಡೆಯುತ್ತಿರುವ ನಿವೃತ್ತರ ಪಿಂಚಣಿಗಿಂತಲೂ ಕೊಲೆ, ಸುಲಿಗೆ, ವಂಚನೆ, ಕಳ್ಳತನ ಮಾಡಿ ಜೈಲು ಸೇರಿರುವ ಕೈದಿಗಳ ದಿನಗೂಲಿ ಹೆಚ್ಚು ಎಂದು ರಾಷ್ಟ್ರೀಯ ಸಂಘರ್ಷ ಸಮಿತಿ(ಎನ್‌ಎಸಿ) ಅಧ್ಯಕ್ಷ ಜಿ.ಎಸ್.ಎಂ.ಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ಕೊಳದ ಗಣಪತಿ ದೇವಸ್ಥಾನ ಮುಂಭಾಗದ ಯಾತ್ರಿ ನಿವಾಸದಲ್ಲಿ ಎನ್‌ಎಸಿ ವತಿಯಿಂದ ಬುಧವಾರ ಆಯೋಜಿಸಿದ್ದ ಚಾಮರಾಜನಗರ ಜಿಲ್ಲಾ ಇಪಿಎಸ್-95 ನಿವೃತ್ತ ಪಿಂಚಣಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದ ನೌಕರರ ಪಿಂಚಣಿ ತುಂಬಾ ಕಡಿಮೆ ಇದೆ. ನೌಕರರು ದುಡಿಯುತ್ತಿದ್ದಾಗ ಸಂಬಳ ಮಾತ್ರ ಪಡೆದುಕೊಂಡಿಲ್ಲ. ಕರ್ನಾಟಕದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ್ಯಾಕ್ಟರಿಗಳ ನೌಕರರಂತೂ ಯಂತ್ರೋಪಕರಣಗಳಿಗೆ ಕೈ, ಕಾಲು ಕೊಟ್ಟು ಅಂಗಾಂಗ ಕಳೆದುಕೊಂಡಿದ್ದಾರೆ. ನಿವೃತ್ತರಾದ ಬಳಿಕ ತಿಂಗಳಿಗೆ 800, ಒಂದು ಸಾವಿರ, ಎರಡು ಸಾವಿರ ರೂ. ಪಿಂಚಣಿ ಪಡೆದು ಎರಡು ಹೊತ್ತಿನ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಜೈಲಿನಲ್ಲಿರುವ ಕೈದಿಗಳಿಗೆ ಹೆಚ್ಚು ದಿನಗೂಲಿ, ತಿಂಗಳಿಗೆ ಅಧಿಕ ಸಂಬಳ ಸಿಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎನ್‌ಎಪಿ ಸಂಘಟನೆಯು ಪಿಂಚಣಿದಾರರಿಗೆ 7500 ರೂ. ಪಿಂಚಣಿ ನೀಡಬೇಕು. ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದೆ. ನಿಧನರಾದ ಪಿಂಚಣಿದಾರರ ಪತ್ನಿ ಅಥವಾ ಪತಿಗೆ ಶೇ.3ರಷ್ಟು ಪಿಂಚಣಿ ನೀಡಬೇಕು. ವಯಸ್ಸಿನ ಅನುಗುಣವಾಗಿ ಬರುವ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ, ಔಷಧಗಳನ್ನು ಕೊಡಿಸಬೇಕು ಎಂದು ಆಗ್ರಹಿಸಿದ್ದೇವೆ. ನಮ್ಮ ಬೇಡಿಕೆಗಳನ್ನು ಸಂಘಟನೆಯ ರಾಷ್ಟ್ರೀಯ ನಾಯಕರು ಪ್ರಧಾನ ಮಂತ್ರಿ ನರೇಂದ್ರಮೋದಿ ಅವರಿಗೆ ತಲುಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೇಡಿಕೆಗಳು ಈಡೇರುವ ವಿಶ್ವಾಸವಿದೆ ಎಂದರು.
ಎನ್‌ಎಸಿ ಮೈಸೂರು ವಿಭಾಗದ ಉಪಾಧ್ಯಕ್ಷ ಹುಚ್ಚಪ್ಪ ಮಾತನಾಡಿ, ಎರಡು ವರ್ಷಗಳ ಹಿಂದೆ ಚಾಮರಾಜನಗರದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ಪಿಂಚಣಿದಾರರ ಸಭೆ ನಡೆಸಿದ್ದೆವು. ಇದೇ ರೀತಿ ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಸಂಘಟನೆ ಮಾಡಿದ್ದೇವೆ. ಪಿಂಚಣಿದಾರರಿಗೆ ಧೈರ್ಯ ತುಂಬಿದ್ದೇವೆ. ನಮ್ಮ ಬೇಡಿಕೆಗಳು ಕೇಂದ್ರ ಸರ್ಕಾರಕ್ಕೆ ತಲುಪುವ ಹಂತಕ್ಕೆ ಬಂದಿದೆ ಎಂದರು. ಎನ್‌ಎಸಿ ಕಾರ್ಯದರ್ಶಿ ಸಿ.ಎಸ್.ಮಂಜುನಾಥ್, ಖಜಾಂಚಿ ಎಸ್.ಎನ್.ಕುಲಕರ್ಣಿ, ಸಂಯೋಜಕ ಸಿ.ಸುಬ್ಬಣ್ಣ, ನಂಜುಂಡೇಗೌಡ, ಚಾಮರಾಜನಗರ ಗೌರವಾಧ್ಯಕ್ಷ ಎಸ್.ಸುರೇಶ್, ಅಧ್ಯಕ್ಷ ಮಹದೇವು, ಪ್ರಧಾನ ಕಾರ್ಯದರ್ಶಿ ಡಿ.ಸೋಮಣ್ಣ, ಉಪಾಧ್ಯಕ್ಷ ದೊಡ್ಡಶೆಟ್ಟಿ ಮತ್ತು ಇತರರು ಇದ್ದರು.