

ಕಮಲನಗರ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ೭ನೇ ವೇತನ ಆಯೋಗದಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ ಅನ್ಯಾಯವಾಗಿದ್ದು, ಪರಿಷ್ಕೃತ ವೇತನಕ್ಕೆ ಅನುಗುಣವಾಗಿ ನಿವೃತ್ತಿ ಉಪಧನ, ಗಳಿಕೆ ರಜೆಯ ನಗದೀಕರಣದ ಸೌಲಭ್ಯಗಳಲ್ಲಿ ಅನ್ಯಾಯವಾಗಿದ್ದು, ಸರಿಪಡಿಸಬೇಕೆಂದು ತಾಲೂಕು ನಿವೃತ್ತ ನೌಕರರ ವೇದಿಕೆ ಆಗ್ರಹಿಸಿದೆ.
ನಿವೃತ್ತ ನೌಕರರ ವೇದಿಕೆ ತಾಲೂಕು ಅಧ್ಯಕ್ಷ ರಘುನಾಥ ರೊಟ್ಟೆ ನೇತೃತ್ವದ ನಿಯೋಗ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಜುಲೈ ೨೦೨೨ ರಿಂದ ಜುಲೈ ೨೦೨೪ ರ ಅವಧಿಯಲ್ಲಿ ೨೫ ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ೭ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತಿ ಉಪಲಬ್ದಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿದೆ ಎಂದು ದೂರಿದರು.
ನಿವೃತ್ತಿ ವೇತನದ ವ್ಯತ್ಯಾಸವನ್ನು ಕೇಳುತ್ತಿಲ್ಲ. ಬದಲಾಗಿ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಜಿ, ಕಮ್ಯುಟೇಶನ್ ಮತ್ತು ಗಳಿಕೆ ರಜೆ ನಗದೀಕರಣಗಳ ಲೆಕ್ಕಾಚಾರದ ಮೊತ್ತವನ್ನು ಮಾತ್ರ ಕೊಡಬೇಕೆಂದು ಆಗ್ರಹಿಸಿದರು.
ನಮ್ಮ ಬೇಡಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಜರುಗಿದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಚಿವ ಸತೀಶ ಜಾರಕಿಹೊಳಿಯವರು ಸರ್ಕಾರದ ಪರ ಮನವಿ ಸ್ವೀಕರಿಸಿ, ಅಧಿವೇಶನ ಮುಗಿದ ಬಳಿಕ ಈ ಕುರಿತು ಸಭೆ ಕರೆದು ಚರ್ಚಿಸಿ ನಿರ್ಧರಿಸೋಣ ಎಂದು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಸಭೆ ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೀಘ್ರದಲ್ಲಿ ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಚರ್ಚಿಸಲು ನಿವೃತ್ತ ನೌಕರರ ವೇದಿಕೆ ಪ್ರಮುಖರೊಂದಿಗೆ ಒಂದು ವಾರದೊಳಗೆ ದಿನಾಂಕ ನಿಗದಿಗೊಳಿಸಿ ಸಭೆ ಕರೆಯಬೇಕೆಂದು ಒತ್ತಾಯಿಸಿದರು.
ನಿವೃತ್ತ ನೌಕರರಾದ ವೆಂಕಟರಾವ ಮುರ್ಗೆ, ಯಶವಂತ ಬಿರಾದಾರ, ಪ್ರಭುರಾವ ಕಳಸೆ, ರಮೇಶ ಪಾಟೀಲ್, ದಿಲೀಪ ಸೋಮವಂಶಿ, ಅರವಿಂದ ಮಾನೆ, ವಿಶ್ವನಾಥ ಕುಂಬಾರಗಿರೆ, ಸುಧಾಕರ ಭಾಸಕರೆ, ರಮೇಶ ಭಯರಪ್ಪ, ಬಾಲಾಜಿ ಕಾಳೇಕರ, ರಾಜಕುಮಾರ ರಾಂಪುರೆ, ಉಮಾಕಾಂತ ಬಿರಾದಾರ, ಉಮಾಕಾಂತ ಸುಲಾಕೆ, ವೀರಭದ್ರಪ್ಪ ಸಜ್ಜನಶೆಟ್ಟಿ, ರಾಜಕುಮಾರ ಬಿರಾದಾರ ಇತರರಿದ್ದರು.