ನಿವಾಸಿಗಳ ಕಷ್ಟ ನಿಮಗೇನು ಗೊತ್ತು : ಸಂಸದ, ಶಾಸಕರ ನೀತಿ ಪಾಠಕ್ಕೆ ಸದಸ್ಯರ ಉತ್ತರ, ಸಮಸ್ಯೆ ಹೇಳುವ ಭರಾಟೆಯಲ್ಲಿ ಅಶಿಸ್ತು

1
Published on

ಕೋಲಾರ: ನಗರಸಭೆಯಲ್ಲಿ ಶನಿವಾರ ಅಧ್ಯಕ್ಷೆ ಶ್ವೇತಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಗೊಂದಲದ ಗೂಡಾಗಿದ್ದು, ಸಂಸದ, ಶಾಸಕ, ಅಧ್ಯಕ್ಷೆ ಹೇಳಿದ ನೀತಿ ಪಾಠಕ್ಕೆ ಸದಸ್ಯರು ಕೇಳುವ ವ್ಯವಧಾನ ತೋರಲಿಲ್ಲ.

ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಸಭೆ 12ಕ್ಕೆ ಶುರುವಾಯಿತು. ಸಭೆ ಆರಂಭವಾಗುತ್ತಿದ್ದಂತೆ ಕೆಲ ಸದಸ್ಯರು ಅಜೆಂಡಾ ಬಿಟ್ಟು ವಾರ್ಡ್​ ಸಮಸ್ಯೆಗಳು, ಇತರ ವಿಷಯಗಳ ಬಗ್ಗೆ ಚರ್ಚಿಸಲು ಮುಂದಾದರು. ಒಂದೇ ಭಾರಿ ನಾಲ್ಕೆ$ದು ಸದಸ್ಯರು ಎದ್ದು ನಿಂತು ಮಾತನಾಡಲು ಮುಂದಾದರು. ಇದರಿಂದ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ತಿಳಿಯದೆ ಗೊಂದಲದ ವಾತಾವರಣ ನಿಮಾರ್ಣವಾಯಿತು.

ಸದಸ್ಯರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಎಸ್​.ಮುನಿಸ್ವಾಮಿ, ನಗರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಜನ ನಮ್ಮ ನಿಮ್ಮನ್ನು ಆಯ್ಕೆಮಾಡಿ ಕಳುಹಿಸಿದ್ದಾರೆ. ನೀವು ಸಭೆ ನಡೆಸುತ್ತಿರುವುದನ್ನು ನೋಡುತ್ತಿದ್ದರೆ ಶಿಸ್ತು ಇಲ್ಲ, ಅಭಿವೃದ್ಧಿ ಬಗ್ಗೆ ನಿಮಗೆ ಕಾಳಜಿಯಿಲ್ಲ ಎಂಬುದು ಕಾಣುತ್ತಿದೆ ಎಂದರು.

ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ಶ್ವೇತಾ ಮಾತನಾಡಿ, ಸದಸ್ಯರು ಶಿಸ್ತು ಪಾಲನೆ ಮಾಡಬೇಕು. ಸಭೆಯ ಘನತೆ, ಗೌರವ ಕಾಪಾಡಬೇಕು ಎಂದು ತಾಕೀತು ಮಾಡಿದರು.

ಸದಸ್ಯ ಪ್ರಸಾದ್​ ಬಾಬು ಮಾತನಾಡಿ, ನಗರದಲ್ಲಿ ಹಾದು ಹೋಗಿರುವ ಹೆದ್ದಾರಿ ರಸ್ತೆಗಳ ಮಧ್ಯೆ ಯುಜಿಡಿ ಪೈಪ್​ಲೈನ್​ ಅನ್ನು ಅವೈಜ್ಞಾನಿಕ ರೀತಿಯಲ್ಲಿ ನಿಮಾರ್ಣ ಮಾಡಲಾಗಿದೆ. ಅವುಗಳ ಮೇಲೆ ಹಾಕಿರುವ ಮುಚ್ಚಳಗಳು ಒಡೆದು ಹೋಗಿದ್ದು, ಬದಲಿಸುವ ಕೆಲಸ ಮಾಡುತ್ತಿಲ್ಲ. ಮ್ಯಾನ್​ಹೋಲ್​ಗಳ ಮುರಿದ ಮುಚ್ಚಳಗಳನ್ನು ಬದಲಿಸುವಂತೆ ಇಂಜಿನಿಯರ್​ ಪೂರ್ಣಿಮಾಗೆ ಸೂಚಿಸಿದರೂ ಕ್ರಮಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಇಂಜಿನಿಯರ್​ ಪೂರ್ಣಿಮಾ, ಯುಜಿಡಿ ರಿಪೇರಿ ಕೆಲಸಗಳಿಗೆ ಹಣವಿಲ್ಲ. ಮುಂದೆ ಇದಕ್ಕೆ ಅನುದಾನ ಬಂದ ತಕ್ಷಣ ಸರಿಪಡಿಸಲಾಗುವುದು ಎಂದು ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಪ್ರಸಾದ್​ ಬಾಬು, "ನಿಮಗೆ ಇವತ್ತು ಹೇಳ್ತಿರೋದಲ್ಲ, ತಿಂಗಳ ಹಿಂದೆಯೇ ಸರಿಪಡಿಸಲು ಹೇಳಿದ್ದು, ಉಡಾಫೆ ಉತ್ತರ ನೀಡಿದರೆ ಕೇಳಿಸಿಕೊಂಡು ಕೂರಲು ಇಲ್ಲಿ ಯಾರೂ ಸಿದ್ಧರಿಲ್ಲ' ಎಂದು ತರಾಟೆಗೆ ತೆಗೆದುಕೊಂಡರು.

ಆಗ ಮಧ್ಯಪ್ರವೇಶಿದ ಶಾಸಕ ಕೆ.ಶ್ರೀನಿವಾಸಗೌಡ, ಇರಲಿ ಕುಳಿತುಕೊ ಮಾರಾಯ, ಸರಿಪಡಿಸೊದಾಗಿ ಹೇಳ್ತಿದ್ದಾರಲ್ಲಾ ಎಂದು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಇದಕ್ಕೆ ಮತ್ತಷ್ಟು ಕೆರಳಿದ ಪ್ರಸಾದ್​ ಬಾಬು, "ಪ್ರತಿದಿನ ಜನರ ಮುಂದೆ ಓಡಾಡೊದು ನಾವು, ಜನರ ಪ್ರಶ್ನೆಗೆ ಉತ್ತರ ಕೊಡೊದು ನಾವು, ನೀವು ಯಾವತ್ತಾದ್ರು ನಗರದಲ್ಲಿ ಸಂಚರಿಸಿ ಸಮಸ್ಯೆಗಳನ್ನು ಆಲಿಸಿದ್ದೀರಾ, ನೀತಿ ಹೇಳೋದು ಸುಲಭ, ಆದರೆ ಜನರ ಬಳಿ ಉತ್ತರಿಸೋದು ಕಷ್ಟ' ಎಂದು ಶಾಸಕರನ್ನು ಪ್ರಶ್ನಿಸಿದರು.

ಪ್ರವಿಣ್​ಗೌಡ ಮಾತನಾಡಿ, ನಗರದಲ್ಲಿನ ಬೀದಿ ದೀಪಗಳ ನಿರ್ವಹಣೆಯಲ್ಲಿ ರ್ನಿಲಕ್ಷ$್ಯ ತೋರಿರುವ ಕಾಂಚನಾ ಎಲೆಕ್ಟ್ರಿಕಲ್​ ಗುತ್ತಿಗೆದಾರನನ್ನು ಕಪು$್ಪ ಪಟ್ಟಿಗೆ ಸೇರಿಸಲು ಒಮ್ಮತದಿಂದ ತೀಮಾರ್ನ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಟೆಂಡರ್​ನಲ್ಲಿ ಅವರು ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ರಾಕೇಶ್​ ಮಾತನಾಡಿ, ಯುಜಿಡಿ ದುರಸ್ತಿಗೆ ಲಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ದುಡ್ಡೆಲ್ಲ ಎಲ್ಲಿಗೆ ಹೋಯಿತು? ನಗರಸಭೆ ಅಧಿಕಾರಿಗಳ ಕೈಯಲ್ಲಿ ಆಗುವುದಿಲ್ಲ ಎಂದಾದರೆ ಬಿಡಿ, ಪಿಡಬ್ಲುಡಿ ಅವರಿಂದ ಮಾಡಿಸಿಕೊಳ್ಳುತ್ತೇವೆ. ಗುತ್ತಿಗೆದಾರ ಯಾರು ಎಂದು ನಾಲ್ಕೆ$ದು ತಿಂಗಳಿಂದ ಮಾಹಿತಿ ಕೇಳುತ್ತಿದ್ದರೂ ಒದಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೌರಾಯುಕ್ತ ಪ್ರಸಾದ್​ರೆಡ್ಡಿ ಮಾತನಾಡಿ, ಸೋಮವಾರ ಸಿಬ್ಬಂದಿಯೊಂದಿಗೆ ವಾರ್ಡ್​ಗಳಿಗೆ ಭೇಟಿ ನೀಡಲಾಗುವುದು. ವಾರ್ಡ್​ಗಳಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಅನುಮೋದನೆ: ನಗರದಲ್ಲಿ ಬೀದಿ ದೀಪಗಳ ನಿರ್ವಹಣೆಗೆ ಟೆಂಡರ್​ ಕರೆಯಲು, ಕೀಲುಕೋಟೆ ಬಡಾವಣೆಯ ಓವರ್​ ಹೆಡ್​ ಟ್ಯಾಂಕ್​ ಜಾಗದಲ್ಲಿ ಅಂಗನವಾಡಿ ಕೇಂದ್ರ ಸ್ಥಾಪನೆ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net