

ಹುಬ್ಬಳ್ಳಿ: ಲಾಕ್ಡೌನ್ ಮಧ್ಯೆಯೂ ನಗರದ ಪ್ರಮುಖ ರಸ್ತೆಗಳಲ್ಲಿ ಗುರುವಾರ ಬೆಳಗ್ಗೆ ಓಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಚನ್ನಮ್ಮ ವೃತ್ತ, ಸವೋದಯ ವೃತ್ತ, ಸ್ಟೇಶನ್ ರಸ್ತೆ, ಕೊಪ್ಪಿಕರ ರಸ್ತೆ, ಗೋಕುಲ ರಸ್ತೆ, ವಿದ್ಯಾನಗರ ಸೇರಿ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆಯಿಂದಲೇ ಬೈಕ್, ಕಾರು, ಆಟೋಗಳ ಸಂಚಾರ ತೀವ್ರಗೊಂಡಿತ್ತು.
ತರಕಾರಿ, ದಿನಸಿ, ಔಷಧ ಇತರ ಅಗತ್ಯ ವಸ್ತುಗಳ ಖರೀದಿಗೆ ಜನರು ಓಡಾಡುತ್ತಿದ್ದರು. ಚನ್ನಮ್ಮ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತಗಳಲ್ಲಿ ಬೆಳಗ್ಗೆ ಸುಮಾರು 11 ಗಂಟೆ ನಂತರ ಪೊಲೀಸರು ಅನಗತ್ಯವಾಗಿ ತಿರುಗುವವರಿಗೆ ಲಾಠಿ ರುಚಿ ತೋರಿಸಿದರು.
ನಂತರ ಚನ್ನಮ್ಮ ವೃತ್ತದ ಮೂಲಕ ತಿರುಗುವವರ ಸಂಖ್ಯೆ ಕಡಿಮೆಯಾಯಿತಾದರೂ ಸ್ಟೇಶನ್ ರಸ್ತೆ, ಗದಗ ರಸ್ತೆ, ಗೋಕುಲ ರಸ್ತೆಗಳಲ್ಲಿ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು.
ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಶೇಖರಯ್ಯ ಮಠಪತಿ, ಚನ್ನಮ್ಮ ವೃತ್ತದಲ್ಲಿ ಸಂಚರಿಸುತ್ತಿದ್ದ ಆಟೋಗಳನ್ನು ತಡೆದು, ಲಾಕ್ಡೌನ್ ಪೂರ್ಣಗೊಳ್ಳುವವರಿಗೂ ರಸ್ತೆಗೆ ಇಳಿಯದಂತೆ ತಿಳಿವಳಿಕೆ ನೀಡುತ್ತಿದ್ದರು.
ಸಂಜೆ ಏಕಾಏಕಿ ಸಂಚಾರ ಸ್ಥಗಿತ!
ಲಾಕ್ಡೌನ್ ಮಧ್ಯೆಯೂ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆಯಿಂದ ಮುಂದುವರಿದಿದ್ದ ವಾಹನ ಸಂಚಾರ, ಸಂಜೆ ಏಕಾಏಕಿ ತಟಸ್ಥಗೊಂಡು ರಸ್ತೆಗಳು ಬಿಕೊ ಎನ್ನತೊಡಗಿದವು. ನಗರದ ಮುಲ್ಲಾ ಓಣಿಯ ಯುವಕನೊಬ್ಬನಿಗೆ ಕರೊನಾ ಸೋಂಕು ಪಾಸಿಟಿವ್ ಕಂಡುಬಂದಿದ್ದು ಬಹಿರಂಗಗೊಳ್ಳುತ್ತಿದ್ದಂತೆಯೇ ರಸ್ತೆಗಳಲ್ಲಿ ತಿರುಗುತ್ತಿದ್ದ ವಾಹನ ಸವಾರರ ಹಾಗೂ ಪಾದಚಾರಿಗಳ ಸಂಖ್ಯೆಯಲ್ಲಿ ಇಳಿಮುಖ ಕಾಣಿಸಿತು.
EndFragment