ನಿಲ್ಲದ ಜಾನುವಾರು ಜಾತ್ರೆ

11_HSN_10(A)
ಚನ್ನರಾಯಪಟ್ಟಣ ಬೂಕನಬೆಟ್ಟದ ರಂಗನಾಥಸ್ವಾಮಿ ದನಗಳ ಜಾತ್ರೆಯಲ್ಲಿ ಎತ್ತುಗಳ ವ್ಯಾಪಾರವು ಜೋರು.
Published on

ಚನ್ನರಾಯಪಟ್ಟಣ: ಬೂಕನಬೆಟ್ಟದ ರಂಗನಾಥಸ್ವಾಮಿ ದನಗಳ ಜಾತ್ರೆಯನ್ನು ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧ ಮಾಡಿತ್ತು. ಆದರೂ ರೈತರು ಜಾತ್ರೆ ಮೈದಾನದ ಸುತ್ತ ಇರುವ ಹೊಲ, ತೋಟ ಮತ್ತು ಸಂಪರ್ಕ ರಸ್ತೆಗಳಲ್ಲಿ ಎತ್ತುಗಳನ್ನು ಕಟ್ಟಿ, ಯಾವುದೇ ಆತಂಕ ಇಲ್ಲದೆ ಪ್ರತಿ ವರ್ಷದಂತೆ ದನಗಳ ಜಾತ್ರೆ ನಡೆಸುತ್ತಿದ್ದಾರೆ. ಎತ್ತುಗಳ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ.
ಕಳೆದ ಒಂದು ವಾರದಿಂದ ಜಾತ್ರೆ ನಡೆಸುವಂತೆ ಅಧಿಕಾರಿಗಳು, ಸಚಿವರು, ಶಾಸಕರು, ಜನಪ್ರತಿನಿಧಿಗಳ ಮೇಲೆ ರೈತರು ಒತ್ತಡ ಹೇರಿದ್ದರು. ಸೋಮವಾರ ಪ್ರತಿಭಟನೆ ಮಾಡಿ, ಬಲವಂತವಾಗಿ ಮೈದಾನದಲ್ಲಿ ದನಗಳನ್ನು ಕಟ್ಟುವ ಪ್ರಯತ್ನ ಮಾಡಿದ್ದರು. ಆದರೆ ತಾಲೂಕು ಆಡಳಿತ ಜಾತ್ರೆ ಮೈದಾನದಲ್ಲಿ ದನದ ಜಾತ್ರೆ ನಡೆಸಲು ಅವಕಾಶ ನೀಡಲಿಲ್ಲ.
ಸೋಮವಾರ ಮಧ್ಯಾಹ್ನದ ನಂತರ ಜಾತ್ರೆ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ಬೂಕ, ಸೋರೇಕಾಯಿಪುರ, ಮತಿಘಟ್ಟ, ಪರಮ ಮತ್ತು ಮಹಾಧ್ವಾರದ ರಸ್ತೆ ಮತ್ತು ಅಕ್ಕಪಕ್ಕದ ಹೊಲ ತೋಟದಲ್ಲಿ ಸುಮಾರು ಎರಡರಿಂದ ಮೂರು ಸಾವಿರಕ್ಕೂ ಹೆಚ್ಚು ಎತ್ತುಗಳನ್ನು ಕಟ್ಟಿ, ವ್ಯಾಪಾರ ಪ್ರಾರಂಭಿಸಿದರು. ಮಂಗಳವಾರ ಬೆಳಗ್ಗೆ ಕೆಲವು ರೈತರು ದೊಡ್ಡ ಎತ್ತುಗಳ ಮೆರವಣಿಗೆ ಸಹ ನಡೆಸಿದರು. ಸಂಜೆವೆರೆಗೆ ಜಾತ್ರೆಗೆ ದನಗಳನ್ನು ವಿವಿಧ ಜಿಲ್ಲೆಗಳಿಂದ ರೈತರು ವಾಹನದಲ್ಲಿ ತರುತ್ತಿದ್ದರು.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆ ಮತ್ತು ಮೈಸೂರು, ಮಂಡ್ಯ, ಕನಕಪುರ, ತುಮಕೂರು, ಹಾಸನ ಜಿಲ್ಲೆಗಳ ರೈತರು, ವ್ಯಾಪಾರಸ್ಥರು ಎತ್ತುಗಳನ್ನು ಕೊಳ್ಳುವುದು ಮತ್ತು ಮಾರುವುದು ಮಾಡುತ್ತಿದ್ದಾರೆ. ಹಲವು ದಾನಿಗಳು, ಸ್ಥಳಿಯ ಜನಪ್ರತಿನಿಧಿಗಳು ಟ್ಯಾಂಕರ್‌ಗಳ ಮೂಲಕ ದನಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ರೈತರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹಿರೀಸಾವೆಯ ಸಂತೋಷ್ ತಿಳಿಸಿದರು.
ಜಾತ್ರೆ ಮೈದಾನದಲ್ಲಿ ದನಗಳು ಇಲ್ಲದೆ ಇರುವುದರಿಂದ ಹೋಟೆಲ್, ಸಿಹಿ ತಿಂಡಿಗಳ ವ್ಯಾಪಾರ ಕಡಿಮೆಯಾಗಿದೆ. ಆದರೆ ಕಾಫಿ, ಟೀ, ಕಬ್ಬಿನ ಹಾಲಿನ ಗಾಡಿಯವರು, ದನಗಳು ಇರುವ ಜಾಗಕ್ಕೆ ಬಂದು ತಮ್ಮ ವ್ಯವಹಾರ ನಡೆಸುತ್ತಿದ್ದಾರೆ. 50 ಸಾವಿರ ರೂ.ಗಳಿಂದ 3 ಲಕ್ಷ ರೂ. ಬೆಲೆಯ ಎತ್ತುಗಳ ಮಾರಾಟ ನಡೆಯಿತು. ಉತ್ತರ ಕರ್ನಾಟಕದ ರೈತರು ಬಂದಿರುವುದರಿಂದ, ಉತ್ತಮವಾಗಿ ದನಗಳು ಮಾರಾಟವಾಗುತ್ತಿವೆ ಎಂದು ನಾಗೇನಹಳ್ಳಿ ರವಿ ಹೇಳಿದರು.
ನಮ್ಮ ತಾಲೂಕಿನಲ್ಲಿ ಜಾತ್ರೆ ಇಲ್ಲ. ದನಗಳನ್ನು ಮಾರಾಟ ಮಾಡಲು ಇಲ್ಲಿಗೆ ಬಂದಿದ್ದೇವೆ. ಅಧಿಕಾರಿಗಳು ಮೈದಾನಕ್ಕೆ ಬಿಟ್ಟಿಲ್ಲ. ಆದರೆ ರಸ್ತೆಯಲ್ಲಿ ಎತ್ತುಗಳನ್ನು ಕಟ್ಟಲಾಗಿದೆ ಎನ್ನುತ್ತಾರೆ ಭೈರಾಪುರ ರೈತ ಶಂಕರೇಗೌಡ.
ಮಂಗಳವಾರ ಜಾತ್ರೆ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಿಗೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಂದಾಯ ಇಲಾಖೆ ಮತ್ತು ಪಶುಪಾಲನೆ ಇಲಾಖೆ ಅಧಿಕಾರಿಗಳು ಜಾತ್ರಾ ಮೈದಾನದಲ್ಲಿ ಇದ್ದು, ಇಲ್ಲಿನ ಆಗುಹೋಗುಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು. ಗುರುವಾರ ಸಹ ಎತ್ತುಗಳ ವ್ಯಾಪಾರ ಜೋರಾಗಿ ನಡೆಯುತ್ತದೆ ಎನ್ನುತ್ತಾರೆ ಹಲವು ರೈತರು. ಜಿಲ್ಲಾಧಿಕಾರಿ ಆದೇಶದಂತೆ ಜಾತ್ರಾ ಮೈದಾನದಲ್ಲಿ ದನಗಳ ಜಾತ್ರೆ ಇಲ್ಲ. ಆದರೆ ರೈತರ ಆಶಯದಂತೆ ಹೊರಭಾಗದಲ್ಲಿ ದನಗಳ ಜಾತ್ರೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net