

ಮಂಡ್ಯ: ಮಾರಕ ಕರೊನಾ ಹೊತ್ತು ತಂದ ಮುಂಬೈ ಕನ್ನಡಿಗರಿಂದ ಜಿಲ್ಲೆಯಲ್ಲಿ ಸೋಂಕಿತರ ನಾಗಲೋಟ ಮುಂದುವರಿದಿದ್ದು, ಭಾನುವಾರ ಮಧ್ಯಾಹ್ನದ ಬುಲೆಟಿನ್‌ನಲ್ಲಿ ಮತ್ತೆ 15 ಜನರಿಗೆ ಪಾಸಿಟಿವ್ ಬಂದಿದೆ.
ಈ ಪೈಕಿ 14 ಜನರು ಕೆ.ಆರ್.ಪೇಟೆಯವರಾದರೆ, ಪಾಂಡವಪುರ ತಾಲೂಕಿನ ಮತ್ತೊಂದು ಮಗುವಿಗೂ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 252ಕ್ಕೆ ಏರಿಕೆಯಾಗಿದೆ. 252ರಲ್ಲಿ ಮುಂಬೈ ಕೊಡುಗೆಯೇ 227 ಎಂಬುದು ಗಮನಾರ್ಹ.
ಉಳಿದಂತೆ ತಬ್ಲಿಘಿಗಳು 20, ಅವರ ದ್ವಿತೀಯ ಸಂಪರ್ಕದ ಒಬ್ಬ, ನಂಜನಗೂಡು ಜುಬಿಲೆಂಟ್ ಕಾರ್ಖಾನೆಯ ಇಬ್ಬರು, ಕೋಲಾರದಿಂದ ನೌಕರ, ರಾಣೆಬೆನ್ನೂರಿನಿಂದ ಬಂದ ಕಾರ್ಮಿಕನ ಪುತ್ರಿಯೊಬ್ಬಳು ಸೇರಿ ಒಟ್ಟು 25 ಪ್ರಕರಣಗಳಾಗಿವೆ.
ಮೇ 17, 18, 19ರಂದು ಬೆಳಗಾವಿಯ ನಿಪ್ಪಾಣಿ, ಧಾರವಾಡ, ಹುಬ್ಬಳ್ಳಿ, ದಾವಣಗೆರೆ ಮೂಲಕ ಆನೆಗೊಳ ಚೆಕ್‌ಪೋಸ್ಟ್‌ಗೆ ಬಂದವರನ್ನು ಕ್ವಾರಂಟೈನ್ ಮಾಡಿ 19ರಂದು ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಪೈಕಿ 15 ಜನರಿಗೆ ಸೋಂಕು ಬಂದಿದೆ. ಈ ಎಲ್ಲರೂ ಮುಂಬೈನ ತಾನಾಜಿ ನಗರ, ಉಲ್ಲಾಸ್‌ನಗರ, ಸಂತಾಕ್ರೂಸ್, ಮಲಾದ್ ಈಸ್ಟ್, ಥಾಣೆ, ಹನೀಫ್ ನಗರ ಮತ್ತಿತರ ಕಡೆಗಳಲ್ಲಿ ಹೋಟೆಲ್, ಗೆಸ್ಟ್ ಹೌಸ್, ಆಟೋ ಚಾಲನೆ ಮೊದಲಾದ ಕೆಲಸ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು, ಗೃಹಿಣಿಯರು ಇದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಸೋಂಕಿತರಿವರು: ಪಿ.2004 ಪುರುಷ-31, ಪಿ.2005 ಪುರುಷ-42, ಪಿ.2012 ಪುರುಷ-40, ಪಿ.2013 ಬಾಲಕ-18, ಪಿ.2014 ಬಾಲಕ 6, ಪಿ.2015 ಬಾಲಕ-6, ಪಿ.2016 ಮಹಿಳೆ 39, ಪಿ.2017 ಪುರುಷ-32, ಪಿ.2018 ಪುರುಷ-44, ಪಿ.2019 ಪುರುಷ-38, ಪಿ.2020 ಬಾಲಕಿ-7 ಸೋಂಕಿತರು.
ರೋಗಿ 869ನಿಂದ ಮತ್ತೆ ನಾಲ್ವರಿಗೆ ಸೋಂಕು: ಮುಂಬೈನಿಂದ ಕದ್ದುಬಂದು ಸೋಂಕಿತನಾಗಿರುವ ಪಿ.869 ಗುಣಮುಖವಾಗಿ ಮನೆಗೆ ಮರಳಿದ ನಂತರ ಅವರ ಪ್ರಥಮ ಸಂಪರ್ಕದಲ್ಲಿದ್ದ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆತನಿಂದ ಸೋಂಕಿತರಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
12 ಜನರ ಪೈಕಿ ಐವರು ಪುರುಷರಾಗಿದ್ದರೆ, 7 ಮಹಿಳೆಯರಾಗಿದ್ದಾರೆ. ಅವರ ಸಂಪರ್ಕದಲ್ಲಿ ಪಿ.2006 ಮಹಿಳೆ-21, ಪಿ.2007 ಮಹಿಳೆ-24, ಪಿ.2008 ಮಹಿಳೆ-42, ಪಿ.2009 ಮಹಿಳೆ-40 ಭಾನುವಾರ ಸೋಂಕು ದೃಢವಾಗಿದೆ.
ಇದಕ್ಕೂ ಮುನ್ನ ಅವರ ಪ್ರಥಮ ಸಂಪರ್ಕದಲ್ಲಿದ್ದ ಪಿ.1467 ಪುರುಷ-27, ಪಿ.1486 ಪುರುಷ-22, ಪಿ.1487 ಪುರುಷ-27, ಪಿ.1597 ಪುರುಷ-42, ಪಿ.1112 ಸೋಂಕಿತನ ಪತ್ನಿ-65, ಪಿ.1113 ಮಹಿಳೆ-60, ಪಿ.1114 ಪುರುಷ-27, ಪಿ.1125 ಮಹಿಳೆ-53ಗೆ ಸೋಂಕು ಹರಡಿದೆ.
ಬರಬೇಕಿದೆ 60-80 ಜನರ ಫಲಿತಾಂಶ
ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಮುಂಬೈನಿಂದ ಕೆ.ಆರ್.ಪೇಟೆ, ನಾಗಮಂಗಲ ಸೇರಿ ಜಿಲ್ಲೆಯ ಇತರೆಡೆ ಈತನಕ 1400ಕ್ಕೂ ಹೆಚ್ಚು ಜನ ಬಂದಿದ್ದು, ಎಲ್ಲರನ್ನೂ ಚೆಕ್‌ಪೋಸ್ಟ್‌ಗಳಲ್ಲಿ ತಡೆದು ಕ್ವಾರಂಟೈನ್ ಮಾಡಿ, ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ಆ ಪೈಕಿ ಪಾಸಿಟಿವ್ ಬಂದವರನ್ನು ನೇರವಾಗಿ ಮಿಮ್ಸ್ ಐಸೋಲೇಷನ್ ವಾರ್ಡ್‌ಗೆ ದಾಖಲಿಸಿದ್ದು, ಇತರರನ್ನು 14 ದಿನ ಕ್ವಾರಂಟೈನ್ ಮಾಡಲಾಗಿದೆ. ಬಹುತೇಕ ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು, ಇನ್ನೂ 60-80 ಜನರ ಫಲಿತಾಂಶ ಬರಬೇಕಿದೆ.
ಅಷ್ಟು ಜನರ ಫಲಿತಾಂಶ ಬಂದಲ್ಲಿ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ. ಬಂದಿರುವ ಯಾರನ್ನು ಗ್ರಾಮೀಣ ಪ್ರದೇಶಗಳಿಗೆ ಬಿಡದೆ ಕ್ವಾರಂಟೈನ್ ಮಾಡಿದ್ದರಿಂದ ಸೋಂಕು ಸಮುದಾಯಕ್ಕೆ ಹರಡುವುದು ತಪ್ಪಿದೆ. ಇದಕ್ಕಾಗಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಶ್ರಮಿಸಿದೆ. ಹಾಗಂತ ಗ್ರಾಮೀಣ ಪ್ರದೇಶದ ಜನರು ನಿರ್ಲಕ್ಷೃ ಮಾಡುವುದು ಬೇಡ. ಮಾಸ್ಕ್, ಪರಸ್ಪರ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ನೂರಕ್ಕೆ ನೂರು ಗುಣಮುಖ: ಜಿಲ್ಲೆಯಲ್ಲಿ ಸೋಂಕಿತರಾದವರು ಹಾಗೂ ಮುಂಬೈನಿಂದ ಬಂದವರಿಗೆ ಮಿಮ್ಸ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದು, ವೈದ್ಯರು, ದಾದಿಯರ ಶ್ರಮದಿಂದ ಈಗಾಗಲೇ 26 ಜನರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ಸೋಂಕು ಪತ್ತೆಯಾಗಿ 16 ರಿಂದ 22 ದಿನ ಮುಗಿಸಿದವರು 100ಕ್ಕೆ 100ರಷ್ಟು ಆರೋಗ್ಯವಾಗಿರುವುದು ಆಶಾದಾಯಕ ಬೆಳವಣಿಗೆ. ಇದು ಇಡೀ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಮಾದರಿಯಾಗಿದೆ. ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಕೂಡ ಸ್ಥಿರವಾಗಿದ್ದು, ಇದರಲ್ಲಿ ವೈದ್ಯರು, ಕೌನ್ಸೆಲಿಂಗ್ ಮಾಡುವವರು, ಪೊಲೀಸರು, ಕಂದಾಯ ಇಲಾಖೆ ಮತ್ತಿತರರ ಅಪಾರ ಶ್ರಮವಿದೆ.
1 ತಿಂಗಳಿನಿಂದ ಅಧಿಕಾರಿಗಳು ದಿನದ 24 ಗಂಟೆ ಕುಟುಂಬದವರನ್ನು ಬಿಟ್ಟು, ಪ್ರಾಣದ ಹಂಗು ತೊರೆದು ಸೇವೆ ಮಾಡುತ್ತಿದ್ದಾರೆ. ಅವರಿಗೆ ವಿಶ್ವಾಸ ತುಂಬಬೇಕಿದೆ. ಇದು ಕೇವಲ 1 ದಿನದಲ್ಲಿ ಕೊನೆಯಾಗುವುದಿಲ್ಲ. ಸೋಂಕಿನ ವಿರುದ್ಧ ನಿರಂತರ ಹೋರಾಟ ಮಾಡಬೇಕಿದೆ. ಆದ್ದರಿಂದ ಎಲ್ಲರೂ ಸಕಾರಾತ್ಮಕ ಆಲೋಚನೆ ಮಾಡಬೇಕಿದೆ ಎಂದು ತಿಳಿಸಿದರು.
ಕ್ವಾರಂಟೈನ್‌ನಲ್ಲಿ ಮಾನವೀಯತೆಯಿಂದ ಕೆಲಸ ಮಾಡುತ್ತಿರುವವರನ್ನು ಅಪಹಾಸ್ಯ ಮಾಡುವುದು, ನಿಂದಿಸುವುದು, ಕಿರುಕುಳ ನೀಡುವುದು ಮಾನವೀಯತೆಯ ವಿರುದ್ಧದ ಕೆಲಸ ಮಾಡಿದಂತೆ ಎಂದು ಹೇಳಿದ್ದಾರೆ.