

ಚಾಮರಾಜನಗರ: ಚೆಲುವ ಚಾಮರಾಜನಗರ ಎಂದು ಕರೆಸಿಕೊಳ್ಳುವ ಜಿಲ್ಲೆಯಲ್ಲಿರುವ ಉದ್ಯಾನವನಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷ್ಯ ವಹಿಸಿದ್ದು, ಅವ್ಯವಸ್ಥೆ ತಾಂಡವವಾಡುತ್ತಿದೆ.
ಜಿಲ್ಲೆಯ ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದ ಮುಂಭಾಗದ ಅವಳಿ ಉದ್ಯಾನವನ, ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನ, ಸಂತೇಮರಹಳ್ಳಿ ರಸ್ತೆಯಲ್ಲಿರುವ ಪುಟ್ಟಮ್ಮಣ್ಣಿ ಪಾರ್ಕ್ ಹಾಗೂ ಇನ್ನಿತರೆ ಉದ್ಯಾನವನಗಳು ನಿರ್ವಹಣೆ ಇಲ್ಲದೇ ಸೊರಗಿದೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನವನದಲ್ಲೂ ಅವ್ಯವಸ್ಥೆಯಿಂದ ತಾಂಡವವಾಡುತ್ತಿದೆ. ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉದ್ಯಾನವನಗಳಲ್ಲಿ ಗಿಡಗೆಂಟಿಗಳು ಬೆಳೆದುಕೊಂಡು ನಿರುಪಯುಕ್ತವಾಗಿದೆ. ಇನ್ನೂ ಗುಂಡ್ಲುಪೇಟೆ ಪುರಸಭೆ ಹಾಗೂ ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತವಾದ ಉದ್ಯಾನವನಗಳು ಇಲ್ಲದೇ ವಾಯುವಿಹಾರಿಗಳು ಕ್ರೀಡಾಂಗಣಗಳನ್ನು ಬಳಕೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಗೆ ಅನುಕೂಲವಾಗುವ ಉದ್ಯಾನವನಗಳನ್ನು ನಿರ್ವಹಣೆ ಮಾಡುವಲ್ಲಿ ವಿಲರಾಗಿದ್ದು, ಈ ವಾರದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
*ಉದ್ಯಾನವನವೇ ನಿರ್ಮಿಸಿ
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉದ್ಯಾನವನವಿದೆ. ಇದರಿಂದ ವಾಯುಹಾರಿಗಳಿಗೆ ಅನುಕೂಲವಾಗಿದೆ. ಆದರೆ ಹನೂರಿನಲ್ಲಿ ಎಲ್ಲಿಯೂ ಉದ್ಯಾನವನವಿಲ್ಲ. ಆಗಾಗಿ ವಾಯುವಿಹಾರಿಗಳು ಕ್ರೀಡಾಂಗಣ ಹಾಗೂ ರಸ್ತೆ ಬದಿಯಲ್ಲಿ ವಾಕಿಂಗ್ ಮಾಡಬೇಕಿದೆ. ಜತೆಗೆ ವೃದ್ಧರು ವಿಶ್ರಾಂತಿ ಪಡೆಯಲು ಜಗುಲಿ ಕಟ್ಟೆಯನ್ನು ಆಶ್ರಯಿಸಬೇಕಿದೆ. ಆದ್ದರಿಂದ ಅಧಿಕಾರಿಗಳು ಇತ್ತ ಗಮನ ಹರಿಸಿ ಹನೂರಿನಲ್ಲಿ ಉದ್ಯಾನವನ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.
ಸೋಮಶೇಖರ್, ನಿವಾಸಿ, ಹನೂರು
*ಉದ್ಯಾನವನವೇ ಇಲ್ಲ
ಹನೂರು ತಾಲೂಕು ಕೇಂದ್ರವಾಗಿ 6 ವರ್ಷವೇ ಕಳೆದಿದೆ. ಇಲ್ಲಿಗೆ ಕೆಲಸ ಕಾರ್ಯಗಳ ನಿಮಿತ್ತ ಜನರು ಆಗಮಿಸುತ್ತಾರೆ.ಆದರೆ ವಿಶ್ರಾಂತಿ ಪಡೆಯಲು ಉದ್ಯಾನವನವೇ ಇಲ್ಲ. ಜತೆಗೆ ಪಟ್ಟಣದಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ವಾಯುವಿಹಾರಿಗಳು ಹೆಚ್ಚು ಅಜ್ಜೀಪುರ ರಸ್ತೆ ಬದಿ, ಎಪಿಎಂಸಿ ಆವರಣ ಹಾಗೂ ಕ್ರೀಡಾಂಗಣವನ್ನು ಅವಲಂಬಿಸಬೇಕಿದೆ. ಆದ್ದರಿಂದ ಹನೂರಿನಲ್ಲಿ ಉದ್ಯಾನವನ ನಿರ್ಮಾಣವಾದರೆ ಜನರಿಗೆ ಅನುಕೂಲವಾಗಲಿದೆ.
ಎಂ.ಬಸವರಾಜು, ನಿವಾಸಿ, ಹನೂರು
*ನಿರ್ವಹಣೆ ಹೆಸರಿನಲ್ಲಿ ಲೂಟಿ
ಚಾ.ನಗರ ನಗರಸಭೆ ವ್ಯಾಪ್ತಿಯಲ್ಲಿ ಹೆಸರಿಗಷ್ಟೇ ಉದ್ಯಾನವನಗಳು ಇದೆ. ಯಾವುದಾದರೂ ಪ್ರಮುಖ ದಿನಗಳಲ್ಲಿ ಮಾತ್ರ ಅವುಗಳಲ್ಲಿ ಸ್ವಚ್ಛತೆ ಮಾಡಲಾಗುತ್ತದೆ ಹೊರತು, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದಿಲ್ಲ. ಕೆಲವು ಉದ್ಯಾನವನಗಳಲ್ಲಿ ಅಳವಡಿಸಿರುವ ಆಟಿಕೆ ಮತ್ತು ವ್ಯಾಯಾಮ ಸಲಕರಣೆಗಳು ಕಿತ್ತುಹೋಗಿದೆ. ಸೂಕ್ತ ನೆರಳು, ಕುಳಿತುಕೊಳ್ಳು ಆಸನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಇನ್ನಿತರೆ ಮೂಲಸೌಕರ್ಯವಿಲ್ಲದೇ ಉದ್ಯಾನವನಗಳು ಸೊರಗಿದೆ. ಆದರೇ ನಗರಸಭೆ ಅಧಿಕಾರಿಗಳು ಉದ್ಯಾನವನ ನಿರ್ವಹಣೆ ಹೆಸರಿನಲ್ಲಿ ಲಕ್ಷಾಂತರ ರೂ, ಲೂಟಿ ಮಾಡುತ್ತಿದ್ದಾರೆ.
ಶಿವಶಂಕರ್ ಎನ್.ಚಟ್ಟು, ನಿವಾಸಿ, ಚಾಮರಾಜನಗರ
*ನಿರ್ವಹಣೆಗೆ ಅನುದಾನ ಮೀಸಲು
ಜಿಲ್ಲಾ ಕೇಂದ್ರದಲ್ಲಿರುವ ಪ್ರಮುಖವಾದ 3 ಉದ್ಯಾನವನಗಳ ನಿರ್ವಹಣೆಗೆ ಅಮೃತ್-2 ಯೋಜನೆಯಡಿ 60 ಲಕ್ಷ ರೂ, ಹಣವನ್ನು ಮೀಸಲಿಡಲಾಗಿದೆ. ಅದಲ್ಲದೇ ಅಮೃತ್ ಮಿತ್ರಾ ಎಂಬ ಯೋಜನೆಯಡಿ ಸ್ವಸಹಾಯ ಸಂಘಗಳ ಮೂಲಕ ಉದ್ಯಾನವನಗಳ ನಿರ್ವಹಣೆ ಮಾಡಲು ಟೆಂಡರ್ ಕರೆಯಲಾಗಿದೆ. ಈ ಯೋಜನೆಯಡಿ 1 ಉದ್ಯಾನವನ ನಿರ್ವಹಣೆಗೆ 10 ಲಕ್ಷ ರೂ, ಅನುದಾನ ಮೀಸಲಿಡಲಾಗಿದೆ. ಸ್ವಸಹಾಯ ಸಂಘದಿಂದ ಪ್ರತಿ ಉದ್ಯಾನವನಕ್ಕೆ 3 ಜನರ ತಂಡವನ್ನು ನೇಮಿಸಿ, ಪ್ರತಿನಿತ್ಯವೂ ನಿರ್ವಹಣೆ ಮಾಡಲಾಗುವುದು. ಅಗತ್ಯವಾದ ಸಾಮಗ್ರಿಗಳು ಬಂದ ನಂತರ ಕೆಲಸ ಪ್ರಾರಂಭವಾಗಲಿದೆ.
ಎಸ್.ವಿ.ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ
*ಮುಳ್ಳಿನ ಗಿಡ ಬೆಳೆದುಕೊಂಡಿದೆ
ಪಟ್ಟಣದ ವ್ಯಾಪ್ತಿಯಲ್ಲಿ ಇರುವ ಉದ್ಯಾನವದಲ್ಲಿ ಮುಳ್ಳಿನ ಗಿಡಗಳು ಬೆಳೆದುಕೊಂಡಿದೆ. ಉದ್ಯಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಮಹಿಳೆಯರು ಹಾಗೂ ಮಕ್ಕಳಿಗೆ ಅನಾನುಕೂಲ ಉಂಟಾಗಿದೆ. ವಾಯುವಿಹಾರಿಗಳು ರಸ್ತೆ ಬದಿಯಲ್ಲಿ ಸಂಚಾರ ಮಾಡುವಂತಾಗಿದೆ. ಆದ್ದರಿಂದ ಉದ್ಯಾನವನದಲ್ಲಿ ಮಕ್ಕಳ ಆಟದ ಪರಿಕರಗಳನ್ನು ಅಳವಡಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಸಮರ್ಪಕ ನಿರ್ವಹಣೆ ಮಾಡಬೇಕು.
ಶೋಭಾ ರಂಗಸ್ವಾಮಿ, ನಿವಾಸಿ, ಯಳಂದೂರು
*ನಿರುಪಯುಕ್ತವಾಗಿದೆ
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 4 ಉದ್ಯಾನವನಗಳಿದೆ. ಆದರೇ ಸಮರ್ಪಕವಾಗಿ ನಿರ್ವಹಣೆ ಮಾಡದೇ ಮುಳ್ಳಿನ ಗಿಡಗಳು ಬೆಳೆದುಕೊಂಡು ನಿರುಪಯುಕ್ತವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಕೂಡಲೇ ಇತ್ತ ಗಮನಹರಿಸಿ ಉದ್ಯಾನವನಗಳು ಉಪಯುಕ್ತವಾಗುವಂತೆ ಗಮನಹರಿಸಬೇಕು.
ಅನಿಲ್, ಮುಖಂಡ, ಯಳಂದೂರು
*ಕ್ರೀಡಾಂಗಣ ಅವಲಂಬನೆ
ಪಟ್ಟಣದಲ್ಲಿ ನಾಗರೀಕರಿಗೆ ವಾಯುವಿಹಾರ ಮಾಡಲು, ವಿರಾಮದ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ಯಾವುದೇ ಉದ್ಯಾನಗಳು ಇಲ್ಲ. ಕೆ.ಎಸ್.ನಾಗರತ್ನಮ್ಮ ಬಡಾವಣೆಯಲ್ಲಿ ಉದ್ಯಾನವಿದ್ದರೂ, ಪುರಸಭೆ ಸರಿಯಾಗಿ ನಿರ್ವಹಿಸದೆ ಪಾಳು ಬೀಳುತ್ತಿದೆ. ಇದರಿಂದ ನಾಗರೀಕರು ವಾಯುವಿಹಾರಕ್ಕೆ ಡಿ.ದೇವರಾಜ ಅರಸು ಕ್ರೀಡಾಂಗಣವನ್ನೇ ಅವಲಂಬಿಸುವಂತಾಗಿದೆ. ಸ್ವಲ್ಪ ಮಳೆಬಿದ್ದರೂ ನೀರು ಒಳಗೆ ನಿಲ್ಲುತ್ತಿದ್ದು, ಮಳೆಗಾಲದಲ್ಲಿ ಉಪಯೋಗಕ್ಕೆ ಬರದಂತಾಗಿದೆ.
ಎಂ.ಸಿ.ಚಿದಾನಂದ, ನಿವಾಸಿ, ಗುಂಡ್ಲುಪೇಟೆ
*ಸಾರ್ವಜನಿಕರ ನಿರ್ಬಂಧ
ಪಟ್ಟಣದ ಹಳೇ ಬಸ್‌ನಿಲ್ದಾಣದ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಪುರಸಭೆ ಆವರಣದಲ್ಲಿ ಇದ್ದ ಉದ್ಯಾನ ನಿರುಪಯುಕ್ತವಾಗಿದೆ. ಕೆ.ಎಸ್.ಎನ್ ಬಡಾವಣೆಯ ಉದ್ಯಾನದಲ್ಲಿ ಓಪನ್ ಜಿಮ್ ಆರಂಭಿಸುವ ಬಗ್ಗೆ ಆಗಾಗ ಹೇಳುತ್ತಿದ್ದರು. ಆದರೆ ನಿರ್ವಹಣೆ ಕೊರತೆಯಿಂದ ಅದು ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ವಿದ್ಯಾಶಂಕರ್, ನಿವಾಸಿ, ಗುಂಡ್ಲುಪೇಟೆ
*ಮುರಿದಿರುವ ಆಟಿಕೆಗಳು
ಕೊಳ್ಳೇಗಾಲದಲ್ಲಿ ಮಹಿಳೆಯರು ಹಾಗೂ ಮಕ್ಕಳ ಉದ್ಯಾನವದಲ್ಲಿರುವ ಮಕ್ಕಳ ಆಟಿಕೆಗಳು ಮುರಿದು ಬಿದ್ದಿದೆ. ಉಯ್ಯಲೆ ಸರಪಳಿ ತುಂಡಾಗಿದ್ದು, ತಕ್ಕಡಿ ಆಟಿಕೆ ಮುರಿದಿದೆ. ಜಾರುಬಂಡಿ ದುಸ್ಥಿತಿಯಲ್ಲಿದೆ. ಮುರಿದ, ತಗ್ಗಿದ ಆಟಿಕೆಗಳಲ್ಲಿ ಮಕ್ಕಳು ಆಟವಾಡುವಾಗ ಗಾಯಗೊಳ್ಳುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ, ಇರುವ ಮಕ್ಕಳ ಒಂದು ಪಾರ್ಕ್ ಕೂಡ ಸುಸ್ಥಿತಿಯಲ್ಲಿಲ್ಲ. ಸಿ.ಕೆ.ಯಮುನಾ, ದೇವಾಂಗ ಪೇಟೆ ನಿವಾಸಿ, ಕೊಳ್ಳೇಗಾಲ
*ಅವ್ಯವಸ್ಥೆಯಿಂದ ಕೂಡಿದೆ
ಪಟ್ಟಣದಲ್ಲಿರುವ ಮಕ್ಕಳ ಪಾರ್ಕ್ ಹಾಗೂ ಪೀಸ್ ಪಾರ್ಕ್ ಅವ್ಯವಸ್ಥೆಯಿಂದ ಕೂಡಿದೆ. ನಗರಸಭೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಪಾರ್ಕ್ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಪೀಸ್ ಪಾರ್ಕ್ ನಿರ್ವ ಹಣೆ ಕೊರತೆಯಿಂದ ಸೊರಗುತ್ತಿದೆ. ಸೊಳ್ಳೆಗಳ ಕಾಟದಿಂದ ವಾಯು ವಿಹಾರಿಗಳಿಗೆ ಬಹಳ ತೊಂದರೆಯಾಗಿದೆ. ಮಕ್ಕಳ ಪಾರ್ಕ್‌ನಲ್ಲಿ ಆಟಿಕೆಗಳು ಶಿಥಿಲಗೊಂಡು ಮೂರು ವರ್ಷವಾಗಿದ್ದರೂ, ಹೊಸ ಆಟಿಕೆಗಳನ್ನು ಅಳವಡಿಸಲು ನಗರಸಭೆ ಮುಂದಾಗಿಲ್ಲ.
ಸುಮ ವೀರಭದ್ರಸ್ವಾಮಿ, ಅಕ್ಕನ ಬಳಗ ಸದಸ್ಯೆ, ಕೊಳ್ಳೇಗಾಲ