ನಿರ್ವಹಣೆ ಇಲ್ಲದೆ ಸಸಿಗಳು ಹಾಳು

10sirsi1
Published on

ಶಿರಸಿ: ಮಕ್ಕಳಲ್ಲಿ ಪರಿಸರ ಮತ್ತು ವಾತಾವರಣದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾರಿಗೊಂಡ ‘ಮಗುವಿಗೊಂದು ಮರ ಶಾಲೆಗೊಂದು ವನ’ ಯೋಜನೆಯಲ್ಲಿ ಶಾಲೆಗಳ ಆವಾರಗಳಲ್ಲಿ ನೆಟ್ಟ ಸಾವಿರಾರು ಗಿಡಗಳು ನಿರ್ವಹಣೆಯಿಲ್ಲದೆ ನಾಶವಾಗಿವೆ.

2019-20ನೇ ಸಾಲಿನಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳಲ್ಲಿ 60 ಸಾವಿರಕ್ಕೂ ಹೆಚ್ಚಿನ ಸಸಿಗಳನ್ನು ನೆಡಲಾಗಿತ್ತು. ಹೀಗೆ ನೆಟ್ಟ ಸಸಿಗಳಲ್ಲಿ ಪ್ರಸ್ತುತ 25 ಸಾವಿರಕ್ಕೂ ಹೆಚ್ಚಿನ ಗಿಡಗಳು ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಶಾಲೆಯ ಆಸ್ತಿ ಪಾಸ್ತಿ, ಜಾಗಗಳ ರಕ್ಷಣೆಯ ಜವಾಬ್ದಾರಿ ಹೊತ್ತ ಶಾಲಾಭಿವೃದ್ಧಿ ಸಮಿತಿ (ಎಸ್​ಡಿಎಂಸಿ) ಹಾಗೂ ಶಿಕ್ಷಕರು ಬೇಸಿಗೆಯಲ್ಲಿ ಹೆಚ್ಚಿನ ನಿಗಾ ವಹಿಸದ ಕಾರಣ ಭೂಮಿಗೆ ಬೇರು ಬಿಟ್ಟು ಗಟ್ಟಿಗೊಳ್ಳಬೇಕಿದ್ದ ಗಿಡಗಳು ಒಣಗಿ ನಾಶವಾಗುವಂತಾಗಿದೆ ಎಂಬ ಆರೋಪ ಬಲವಾಗಿ ಕೇಳುತ್ತಿದೆ.

ಬೇಸಿಗೆಯಲ್ಲಿ ನೀರಿಲ್ಲ: ಲಾಕ್​ಡೌನ್ ಆರಂಭವಾದ ಮಾರ್ಚ್ ತಿಂಗಳಾಂತ್ಯದಿಂದ ಮಳೆ ಆರಂಭವಾಗುವವರೆಗೂ ನೀರಿಲ್ಲದೆ ಗಿಡಗಳು ಬಿಸಿಲ ತಾಪಕ್ಕೆ ಒಣಗುವ ಜತೆ ಬರಾವು, ಗೊಬ್ಬರವಿಲ್ಲದೆ ಸೊರಗಿ ಮಣ್ಣುಪಾಲಾಗಿವೆ. ಬಹುತೇಕ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಯವರು ಈ ಗಿಡಗಳ ಬಗ್ಗೆ ನಿರ್ಲಕ್ಷ್ಯ ತೋರಿದ ಪರಿಣಾಮ ಮಕ್ಕಳು ಉತ್ಸಾಹದಿಂದ ನೆಟ್ಟ ಗಿಡಗಳೆಲ್ಲ ಹಾಳಾಗಿವೆ. ಕೆಲ ಶಾಲೆಗಳ ಸುತ್ತ ಬರೀ ಹೊಂಡಗಳು ಮಾತ್ರ ರಾರಾಜಿಸುತ್ತಿದ್ದು, ಗಿಡ ನೆಟ್ಟ ಮಕ್ಕಳು ಶಾಲೆಗೆ ವಾಪಸ್ಸಾದರೆ ಏನು ಹೇಳುವುದೆಂದು ಶಿಕ್ಷಕರು ಚಿಂತಿತರಾಗಿದ್ದಾರೆ. ಅರಣ್ಯ ಇಲಾಖೆಯು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆಸಿದ ಗಿಡಗಳು ನಾಶವಾಗಿದ್ದು, ಸರ್ಕಾರಿ ಹಣ ಪೋಲಾದಂತಾಗಿದೆ ಎಂಬುದು ಕೆಲ ಪಾಲಕರ ಅಭಿಪ್ರಾಯ.

ಗಾಯದ ಮೇಲೆ ಬರೆ: ಒಂದೆಡೆ ಈಗಾಗಲೇ ನೆಟ್ಟ ಗಿಡಗಳು ನಾಶವಾದರೆ ಇನ್ನೊಂದೆಡೆ ಈ ವರ್ಷ ಯೋಜನೆ ಮುಂದುವರಿಕೆಗೆ ಅರಣ್ಯ ಇಲಾಖೆಗೆ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವಾಗಲಿ, ನಿರ್ದೇಶನವಾಗಲಿ ಬಂದಿಲ್ಲ. ಇದರಿಂದ ಶಾಲೆಗೊಂದು ವನ ನಿರ್ವಿುಸುವ ಮಕ್ಕಳ ಕನಸಿಗೆ ತಣ್ಣೀರೆರಚಿದಂತಾಗಿದೆ ಎಂಬುದು ಪಾಲಕರ ಮಾತು.

ಕಳೆದ ವರ್ಷ ನೆಟ್ಟ ಬಹುತೇಕ ಗಿಡಗಳು ಬೇಸಿಗೆಯಲ್ಲಿ ನಿರ್ವಹಣೆ ಇಲ್ಲದೆ ಸೊರಗಿವೆ ಹಾಗೂ ನಾಶವಾಗಿವೆ. ಲಾಕ್​ಡೌನ್ ಕಾರಣಕ್ಕೆ ಶಾಲೆ ಬಾಗಿಲು ಮುಚ್ಚಿರುವ ಹಿನ್ನೆಲೆಯಲ್ಲಿ ನೆಟ್ಟ ಗಿಡಗಳನ್ನು ಉಳಿಸಿಕೊಳ್ಳಲು ಕಷ್ಟವಾಗಿತ್ತು. ಈ ಬಗ್ಗೆ ಶಾಲೆಗಳು ಆರಂಭವಾದ ನಂತರ ಸರ್ವೆ ನಡೆಸಿ ನಿಖರ ಮಾಹಿತಿ ಸಂಗ್ರಹಿಸಲಾಗುವುದು. | ದಿವಾಕರ ಶೆಟ್ಟಿ ಡಿಡಿಪಿಐ

ಕಳೆದ ವರ್ಷ ಉಚಿತವಾಗಿ ಶಾಲಾ ಮಕ್ಕಳಿಗೆ ಗಿಡ ಹಂಚಲಾಗಿತ್ತು. ಈ ವರ್ಷ ಯೋಜನೆಯಡಿ ಗಿಡ ವಿತರಿಸಲು ಇನ್ನೂ ಅನುದಾನ ನಿಗದಿಯಾಗಿಲ್ಲ. | ಎಸ್.ಜಿ. ಹೆಗಡೆ ಡಿಸಿಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net