

ಬೆಳಗಾವಿ: ಮಹಾನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಹಾಕಿರುವ ಬೀದಿ ದೀಪಗಳ ನಿರ್ವಹಣೆ ಸಮಪರ್ಕವಾಗಿ ಮಾಡದಿರುವುದರಿಂದ ನಗರದ ಕೆಲವೆಡೆ ರಾತ್ರಿ ವೇಳೆ ಬೀದಿ ದೀಪಗಳು ಉರಿಯದೇ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.
ನಗರದ ಬಿ.ಎಸ್.ಯಡಿಯೂರಪ್ಪ ಮಾರ್ಗ, ಹಳೇ ಪಿಬಿ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಪ್ರವಾಸಿ ಮಂದಿರ, ಅಶೋಕ ವೃತ್ತ ರಸ್ತೆ, ಹೆದ್ದಾರಿ ಸರ್ವಿಸ್ ರಸ್ತೆಗಳು, ಕಣಬರ್ಗಿ ರಸ್ತೆ, ಕಾಲೇಜು, ಹನುಮಾನ ನಗರ, ಸದಾಶಿವ ನಗರ, ಜಿಲ್ಲಾಸ್ಪತ್ರೆ ರಸ್ತೆ, ಖಡೇಬಜಾರ, ಶಹಾಪುರ, ವಡಗಾಂವಿ, ಅನಗೋಳ, ಎಪಿಎಂಸಿ ರಸ್ತೆ ಸೇರಿ ವಿವಿಧೆಡೆ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ದೀಪಗಳು ಉರಿಯದೇ ರಾತ್ರಿ ವೇಳೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ನಗರದ ರಸ್ತೆಯ ಎರಡು ಬದಿಗಳಲ್ಲಿ ಬಿಡಾಡಿ ದನ, ಬೀದಿ ನಾಯಿಗಳು ಮಲಗಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ನಗರದ ಅನೇಕ ಪ್ರಮುಖ ರಸ್ತೆ, ವಸತಿ ನಿಲಯ ಪ್ರದೇಶ ಹಾಗೂ ವ್ಯಾಪಾರ ವಲಯಗಳಲ್ಲಿ ಬೀದಿ ದೀಪಗಳು ಬಂದ್ ಆಗಿದ್ದಿಂದ ಸಂಪೂರ್ಣ ಕತ್ತಲಿನಲ್ಲಿ ಮುಳುಗಿವೆ. ಇದರಿಂದ ರಾತ್ರಿ ವೇಳೆಯಲ್ಲಿ ನಾಗರಿಕರಿಗೆ ತೀವ್ರ ಅನಾನುಕೂಲ ಉಂಟಾಗಿದೆ.
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ಆಗಿದ್ದರಿಂದ ಮಧ್ಯರಾತ್ರಿಯವರೆಗೂ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ವಿದ್ಯುತ್ ದೀಪಗಳು ಉರಿಯದೇ ಇರುವುದರಿಂದ ಅವಘಡ ಸಂಭವಿಸುತ್ತಿವೆ. ಬಿಡಾಡಿ ಹಾಗೂ ಬೀದಿ ನಾಯಿಗಳ ಕಾಟವೂ ಹೆಚ್ಚಾಗಿದೆ. ಬೀದಿ ದೀಪಗಳನ್ನು ಸಮಪರ್ಕವಾಗಿ ನಿರ್ವಹಣೆ ಮಾಡದೇ ಇರುವ ಕಾರಣಕ್ಕೆ ಸಾರ್ವಜನಿಕರು ಬೆಳಗಾವಿ ಮಹಾನಗರ ಪಾಲಿಕೆ, ಬುಡಾ, ಸ್ಮಾರ್ಟ್ ಸಿಟಿ, ದಂಡು ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುಂದು ವೆಚ್ಚ: ಮಹಾನಗರದಲ್ಲಿ ಬೀದಿ ದೀಪಗಳನಿರ್ವ ಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಖಾಸಗಿ ವ್ಯಕ್ತಿಗೆ ಗುತ್ತಿಗೆ ನೀಡಲಾಗಿದೆ. ನಿರ್ವಹಣೆಗಾಗಿ ವಾರ್ಷಿಕ ಲಕ್ಷಾಂತರ ರೂ. ಹಣ ನೀಡಿದರೂ ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಎಲ್ಲೆಡೆ ಎಲ್‌ಇಡಿ ಬಲ್ಬ್ ಹಾಕಬೇಕು ಎಂಬ ನಿಯಮವಿದೆ. ಆದರೆ, ಕೆಲ ಭಾಗದಲ್ಲಿ ಹೊಸ ಬಲ್ಬ್ ಅಳವಡಿಕೆ ಮಾಡಿಲ್ಲ. ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮಸ್ಯೆ ಉದ್ಭವಿಸಿದೆ ಎಂದು ಪಾಲಿಕೆ ಸದಸ್ಯರು ದೂರಿದ್ದಾರೆ.
ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ, ಕಂಬಗಳಿಗೆ ಬಲ್ಬ್ ಅಳವಡಿಸದಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು. ಕೂಡಲೇ ಎಲ್ಲೆಡೆ ಬೀದಿ ದೀಪ ಅಳವಡಿಸುಲು ಸೂಚನೆ ನೀಡಲಾಗುವುದು. | ಶುಭ ಬಿ,. ಪಾಲಿಕೆ ಆಯುಕ್ತೆ