ನಿರ್ವಹಣೆ ಇಲ್ಲದೆ ಅಂದ ಕಳೆದುಕೊಂಡ ಬಸ್ ನಿಲ್ದಾಣ : ಸ್ವಚ್ಛತೆ ಮರೀಚಿಕೆ, ಕಣ್ಣಿಗೆ ರಾಚುವ ಕಸದ ರಾಶಿ

1
Published on

ಅಭಿಲಾಷ್ ತಿಟ್ಟವಾರನಹಳ್ಳಿ ಚನ್ನಪಟ್ಟಣ

ರಾಜ್ಯದ ತಾಲೂಕು ಕೇಂದ್ರಗಳಲ್ಲಿರುವ ಕೆಲವೇ ಕೆಲವು ಸುಸಜ್ಜಿತ ಬಸ್ ನಿಲ್ದಾಣಗಳಲ್ಲಿ ನಗರದ ಸರ್ಕಾರಿ ಬಸ್ ನಿಲ್ದಾಣವೂ ಒಂದು. ಆದರೆ, ಸೂಕ್ತ ನಿರ್ವಹಣೆ ಇಲ್ಲದೆ ಅಂದ ಕಳೆದುಕೊಂಡಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲೇ ಇರುವ ನಿಲ್ದಾಣ 2006ರಲ್ಲಿ ಲೋಕಾರ್ಪಣೆಯಾಯಿತು. ವಿಶಾಲವಾದ ಜಾಗ, ಅತ್ಯಾಕರ್ಷಕ ವಿನ್ಯಾಸದೊಂದಿಗೆ ತಾಲೂಕಿಗೆ ಕಿರೀಟ ಪ್ರಾಯ ಎನ್ನುವಂತಿತ್ತು. ಉತ್ತಮ ಪಾರ್ಕಿಂಗ್ ವ್ಯವಸ್ಥೆ, ಹತ್ತಾರು ಅಂಗಡಿ ಮಳಿಗೆಗಳು, ಆಸನಗಳ ವ್ಯವಸ್ಥೆ ಸೇರಿ ಹಲವು ಸೌಲಭ್ಯಗಳು ನಿಲ್ದಾಣದ ಮೆರುಗು ಹೆಚ್ಚಿಸಿದ್ದವು. ಆದರೆ ಇಂದು ಇದೇ ನಿಲ್ದಾಣ ಅವ್ಯವಸ್ಥೆ ಆಗರವಾಗಿದೆ.

ಸ್ವಚ್ಛತೆ ಮರೀಚಿಕೆ: ಪ್ರತಿನಿತ್ಯ ಸಾವಿರಾರು ಮಂದಿ ಬಂದು ಹೋಗುವ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ನಿಲ್ದಾಣ ಪ್ರವೇಶಿಸುತ್ತಲ್ಲೇ ಕಸದ ರಾಶಿ ಸ್ವಾಗತಿಸುತ್ತದೆ. ನಿಲ್ದಾಣದ ಗೋಡೆಗಳ ಮೇಲೆ ಉಗಿದಿರುವ ಗುಟ್ಕಾ ಕಲೆಗಳು ನಿಲ್ದಾಣಕ್ಕೆ ಕಪ್ಪುಚುಕ್ಕಿಯಂತೆ ಭಾಸವಾಗುತ್ತಿವೆ. ಶೌಚಗೃಹಗಳ ಸ್ಥಿತಿಯಂತೂ ಅಯೋಮಯವಾಗಿದೆ. ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಹರಿಯುತ್ತಿರುವ ಕಲುಷಿತ ನೀರು ನಿಲ್ದಾಣ ಪ್ರವೇಶಿಸುವ ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಕಸಿವಿಸಿ ಉಂಟು ಮಾಡುತ್ತಿದೆ. ನಿಲ್ದಾಣದ ಎಲ್ಲೆಡೆ ಪ್ಲಾಸ್ಟಿಕ್, ನೀರಿನ ಬಾಟಲಿ ಸೇರಿ ಇನ್ನಿತರ ತ್ಯಾಜ್ಯಗಳೇ ರಾಚುತ್ತವೆ. ನಿಲ್ದಾಣದ ಮೇಲ್ಛಾವಣಿಯಲ್ಲಿ ಕಟ್ಟಿರುವ ಜೇಡರ ಬಲೆಗಳು ಭೂತಬಂಗಲೆಯನ್ನು ನೆನಪಿಸುತ್ತವೆ. ಶೌಚಗೃಹದ ಬಳಿ ಮದ್ಯದ ಪ್ಯಾಕೆಟ್‌ಗಳು ಯಥೇಚ್ಚವಾಗಿ ಬಿದ್ದಿರುವುದು ನಿಲ್ದಾಣದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿವೆ.

ನಿರ್ಲಕ್ಷ್ಯವೇ ಕಾರಣ: ಬಸ್ ನಿಲ್ದಾಣದ ಸ್ವಚ್ಛತೆ ನಿರ್ವಹಣೆ ಹೊಣೆ ಹೊತ್ತಿರುವ ಖಾಸಗಿ ಸಂಸ್ಥೆ ಬೇಜವಾಬ್ದಾರಿತನ ಹಾಗೂ ಸಾರಿಗೆ ಘಟಕದ ಅಧಿಕಾರಿಗಳ ನಿರ್ಲಕ್ಷ್ಯ ಉತ್ತಮ ದರ್ಜೆಯ ಬಸ್ ನಿಲ್ದಾಣ ಅವ್ಯವಸ್ಥೆಯ ಕೂಪವಾಗಲು ಕಾರಣ ಎನ್ನಲಾಗಿದೆ. ನಿಲ್ದಾಣದ ಸ್ವಚ್ಛತೆಗೆ ಗುತ್ತಿಗೆ ಪಡೆಯುವ ಏಜೆನ್ಸಿಗಳ ಹಣ ಬಾಕತನಕ್ಕೆ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ರಾಜ್ಯದ ವಿವಿಧೆಡೆ ಆಯಾ ಸಾರಿಗೆ ಘಟಕಗಳೇ ನಿಲ್ದಾಣದ ಸ್ವಚ್ಛತೆ ನಿರ್ವಹಣೆಗೆ ಹಣ ನೀಡುತ್ತವೆ. ಆದರೆ, ಈ ನಿಲ್ದಾಣದಲ್ಲಿ ಟೆಂಡರ್ ಪಡೆಯಲು ಸಾಕಷ್ಟು ಲಾಬಿ ಇದ್ದು, ಸಾರಿಗೆ ಟಕಕ್ಕೆ ಏಜೆನ್ಸಿಗಳೇ ಹಣ ನೀಡುತ್ತವೆ. ಕಾರಣ, ನಿಲ್ದಾಣದಲ್ಲಿರುವ ಶೌಚಗೃಹ ಬಳಕೆಯಿಂದ ಬರುವ ಆದಾಯಕ್ಕೆ ಗಮನ ನೀಡುವ ಗುತ್ತಿಗೆದಾರರು ನಿಲ್ದಾಣದ ಸ್ವಚ್ಛತೆಯನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪವೂ ಇದೆ.

ಆದಾಯ ತಂದುಕೊಡುವ ಖಜಾನೆ: ನಗರದ ಸರ್ಕಾರಿ ಬಸ್ ನಿಲ್ದಾಣ ಸಾರಿಗೆ ಘಟಕಕ್ಕೆ ಆದಾಯ ತಂದುಕೊಡುವ ಖಜಾನೆ ಎಂದರೆ ತಪ್ಪಾಗಲಾರದು. ನಿಲ್ದಾಣದಲ್ಲಿರುವ ಹತ್ತಾರು ಅಂಗಡಿಗಳು, ಹೋಟೆಲ್, ಪಾರ್ಕಿಂಗ್ ಸೇರಿ ಪ್ರತಿತಿಂಗಳು ಲಕ್ಷಾಂತರ ರೂ. ಆದಾಯ ಬರುತ್ತಿದೆ. ಹೀಗಿದ್ದರೂ ದಿನ ಕ್ರಮೇಣ ಸಂಬಂಧಪಟ್ಟವರ ನಿರ್ಲಕ್ಷ್ಯ ಹಾಗೂ ಬೇಜಾವಾಬ್ದಾರಿತನದಿಂದ ನಿಲ್ದಾಣದ ಅಂದ ಕೆಡುತ್ತಿದೆ. ಇದಕ್ಕೆಲ್ಲಾ ಮುಕ್ತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇರುವುದು ಮೂರೇ ಕಾರ್ಮಿಕರು: ವಿಶಾಲವಾದ ಜಾಗದಲ್ಲಿರುವ ನಿಲ್ದಾಣದ ಸ್ವಚ್ಛತೆಗೆ ಇರುವುದು ಮೂವರೇ ಕಾರ್ಮಿಕರು. ಇದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ನಿಲ್ದಾಣ ನಿರ್ವಹಣೆ ಹೊಣೆ ಹೊತ್ತಿರುವ ಗುತ್ತಿಗೆ ಸಂಸ್ಥೆ ಈ ಮೂವರು ಕಾರ್ಮಿಕರಿಗೂ ತಿಂಗಳುಗಟ್ಟಲೇ ವೇತನ ನೀಡಿಲ್ಲ. ಕನಿಷ್ಠ 20 ಮಂದಿ ಕೆಲಸ ವಾಡಬೇಕಾದ ಕೆಲಸ ಮಾಡುತ್ತಿರುವ ಈ ಮೂವರಿಗೆ ವೇತನ ಹಾಗೂ ಇತರ ಸೌಲಭ್ಯ ನೀಡದೆ ಮೋಸ ಮಾಡಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಕಾರ್ಮಿಕ ಇಲಾಖೆ ಮಧ್ಯ ಪ್ರವೇಶಿಸಿ ಬಸ್‌ನಿಲ್ದಾಣ ಹಾಗೂ ಕಾರ್ಮಿಕರ ಹಿತ ಕಾಪಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ನಿಲ್ದಾಣದಲ್ಲಿ ಸ್ಚಚ್ಛತೆ ಹುಡುಕಬೇಕಿದೆ. ಸ್ವಚ್ಛತಾ ಕಾರ್ಯದ ಹೊಣೆ ಹೊತ್ತಿರುವ ಗುತ್ತಿಗೆ ಸಂಸ್ಥೆ ಕೇವಲ ಶೌಚಗೃಹದಿಂದ ಬರುವ ಆದಾಯದ ಬಗ್ಗೆ ಗಮನಹರಿಸುತ್ತಿದೆ. ಇಷ್ಟು ದೊಡ್ಡ ನಿಲ್ದಾಣವನ್ನು ಮೂರು ಕಾರ್ಮಿಕರು ಸ್ವಚ್ಛಗೊಳಿಸಲು ಸಾಧ್ಯವೇ? ಅವರಿಗೂ ಹಲವು ತಿಂಗಳಿನಿಂದ ವೇತನ ನೀಡಿಲ್ಲ. ಅಧಿಕಾರಿಗಳಿಗೆ ದೂರು ನೀಡಿದ ದಿನ ಮಾತ್ರ ಕಾಟಾಚಾರಕ್ಕೆ ಎಂಬಂತೆ ನಿಲ್ದಾಣ ಸ್ವಚ್ಛಗೊಳುತ್ತದೆ. ಇದರಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ನಿಲ್ದಾಣದ ನಿರ್ವಹಣೆಯನ್ನು ಅಧಿಕಾರಿಗಳು ಮರೆತಿದ್ದಾರೆ. ನಾಗೇಶ್, ಚನ್ನಪಟ್ಟಣ ನಿಲ್ದಾಣದಲ್ಲಿ ಯಾವುದೇ ಸಮಸ್ಯೆಯಾದರೂ ತಕ್ಷಣವೇ ಸ್ಪಂದಿಸುತ್ತಿದ್ದೇವೆ. ಸ್ವಚ್ಛತೆ ದೂರು ಬಂದಾಗ ಖುದ್ದು ಬಗೆಹರಿಸಲಾಗಿದೆ. ಹೊಸದಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಯಾವುದೇ ಸಮಸ್ಯೆಯಾಗದಂತೆ ನಿಲ್ದಾಣವನ್ನು ನೋಡಿಕೊಳ್ಳಲಾಗುವುದು. ಕಾರ್ಮಿಕರಿಗೆ ವೇತನ ನೀಡದಿರುವುದು ತಿಳಿದುಬಂದಿಲ್ಲ. ಕೂಡಲೇ ಗುತ್ತಿಗೆ ಸಂಸ್ಥೆ ಚರ್ಚಿಸಿ ವೇತನ ನೀಡಲು ಸೂಚಿಸಲಾಗುವುದು. ರಾವೇಂದ್ರ, ವ್ಯವಸ್ಥಾಪಕರು ಚನ್ನಪಟ್ಟಣ ಸಾರಿಗೆ ಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net