

ಚಿತ್ರದುರ್ಗ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಹಾಯಧನ ಸಹಿತ ಸಾಲ ನೀಡುವ ಸಾಮಾಜಿಕ ಭದ್ರತಾ ಯೋಜನೆಗಳು ಸಾಕಷ್ಟು ಲ್ಯಾಪ್ಸ್ ಆಗುತ್ತಿವೆ. ವಿಳಂಬ ಧೋರಣೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಲೀಡ್ ಬ್ಯಾಂಕ್‌ನ ಜಿಲ್ಲಾಮಟ್ಟದ ಸಲಹಾ ಮತ್ತು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಒಟ್ಟಾಗಿ ಕೆಲಸ ನಿರ್ವಹಿಸದಿದ್ದರೆ, ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುವುದಿಲ್ಲ. ಆದ್ದರಿಂದ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಮಾಡುವ ಅಧಿಕಾರಿ, ಬ್ಯಾಂಕ್ ಶಾಖೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ರೈತರು ಹಾಗೂ ಅರ್ಹರೆಲ್ಲರ ಮನೆಬಾಗಿಲಿಗೆ ತಲುಪಿಸಬೇಕು. ಸತತ 3 ವರ್ಷಗಳಿಂದಲೂ ಅನೇಕ ಅರ್ಜಿಗಳು ಬಾಕಿ ಉಳಿದಿವೆ. ಹಿಂದಿನ ಸಭೆಯಲ್ಲಿ ಸೂಚಿಸಿದ್ದರೂ ಒಂದು ಅರ್ಜಿ ವಿಲೇವಾರಿ ಆಗಿಲ್ಲ. ಶೀಘ್ರ ಎಲ್ಲಾ ಅರ್ಜಿ ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದರು.
ವಿವಿಧ ನಿಗಮಗಳಡಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಜೀವನಮಟ್ಟ ಸುಧಾರಣೆ ಸಂಬಂಧ ಸಹಾಯಧನ, ರೈತರಿಗೆ ಸಾಲ ಸೌಲಭ್ಯ, ಬೆಳೆವಿಮೆ ಪರಿಹಾರ ಸೇರಿ ಹಲವು ಸ್ವಾವಲಂಬಿ ಯೋಜನೆಗಳಿದ್ದು, ತ್ವರಿತವಾಗಿ ಅರ್ಜಿ ವಿಲೇವಾರಿಗೊಳಿಸಿ, ಫಲಾನುಭವಿಗಳಿಗೆ ನೆರವಾಗಿ ಎಂದು ಸೂಚಿಸಿದರು.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 2018ರಿಂದ ಈವರೆಗೆ ಜಿಲ್ಲೆಯಲ್ಲಿ ಇನ್ನೂ 283 ಅರ್ಜಿಗಳು ಬ್ಯಾಂಕ್ ವ್ಯವಸ್ಥಾಪಕರ ಲಾಗಿನ್‌ನಲ್ಲಿ ಬಾಕಿ ಉಳಿದಿವೆ. ಇದರಿಂದಾಗಿ ರೈತರಿಗೆ ಪರಿಹಾರದ ಮೊತ್ತ ಪಾವತಿಯಾಗಿಲ್ಲ. ಎರಡ್ಮೂರು ದಿನಗಳಲ್ಲೇ ವಿಲೇವಾರಿ ಮಾಡಬಹುದು. ಪರಿಹಾರದ ಹಣ ವಾಪಾಸು ಹೋದರೆ, ಯಾರನ್ನೂ ಕೇಳಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸಭೆಗೆ ಮಾಹಿತಿ ನೀಡಿದರು.
ಜಿಪಂ ಸಿಇಒ ಎಂ.ಎಸ್.ದಿವಾಕರ್ ಪ್ರತಿಕ್ರಿಯಿಸಿ, ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ, ಶೀಘ್ರ ರೈತರಿಗೆ ಬೆಳೆ ವಿಮೆ ಹಣ ಪಾವತಿಯಾಗುವಂತೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.