ನಿರ್ಮಿತಿ ಕೇಂದ್ರದಲ್ಲಿ 7 ಕೋಟಿ ರೂ. ದುರ್ಬಳಕೆ

ctd 23 mudalagiriyappa--03
Published on

ಚಿತ್ರದುರ್ಗ:ಕಾನೂನು ಬಾಹಿರವಾಗಿ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ 7.04 ಕೋಟಿ ರೂ. ದುರುಪಯೋಗದ ಆರೋಪದಡಿ ಈಗಾಗಲೇ ಬೇರೆ ಪ್ರಕರಣದಲ್ಲಿ ವಜಾಗೊಂಡಿದ್ದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೆ.ಜಿ.ಮೂಡಲಗಿರಿಯಪ್ಪ ಅವರನ್ನು ನಗರದ ಸೈಬರ್ ಕ್ರೈಂ ಠಾಣೆ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.
ನಿರ್ಮಿತಿ ಕೇಂದ್ರದ ಆಡಳಿತ ಮಂಡಳಿ ನಿರ್ದೇಶನಗಳನ್ನು ಉಲ್ಲಂಘಿಸಿ, ಕೇಂದ್ರದ ಅಧ್ಯಕ್ಷರು, ಕಾರ್ಯಾಧ್ಯಕ್ಷರ ಲಿಖಿತ ಅನುಮತಿ ಇಲ್ಲದೆ ಹಾಗೂ ಜಂಟಿ ಸಹಿ ಪಡೆಯದೆ 25 ಸಾವಿರ ರೂ. ಒಳಗಿನ ಹಲವು ಚೆಕ್‌ಗಳ ಮೂಲಕ 2023ರಿಂದ ಫೆಬ್ರವರಿ 24ರಿಂದ ಜೂನ್ 21 ರವರೆಗೆ ಬೇನಾಮಿ ವ್ಯಕ್ತಿಗಳಿಗೆ ಬಿಲ್ ಪಾವತಿಸಿದ್ದರು.
ಈ ಕುರಿತಂತೆ ಕೇಂದ್ರದ ಯೋಜನಾ ನಿರ್ದೇಶಕ ಯು.ಆರ್.ಸತ್ಯನಾರಾಯಣ, ಭಾನುವಾರ ನೀಡಿದ್ದ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಿದ್ದ ಸೈಬರ್ ಕ್ರೈಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಪತ್ತೆಗೆ ಸೈಬರ್ ಕ್ರೈಂ ಠಾಣೆ ಪಿಎಸ್‌ಐ ಮಂಜುನಾಥ್, ಸಿಬ್ಬಂದಿ ಗಂಗಾಧರ್, ಮೋಹನ್‌ಕುಮಾರ್ ನಾಯ್ಕ ಇತರರನ್ನೊಳಗೊಂಡ ತಂಡ ರಚಿಸಲಾಗಿತ್ತು ಎಂದು ಎಸ್‌ಪಿ ಕೆ.ಪರಶುರಾಮ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net