ನಿರ್ಮಿತಿ ಕೇಂದ್ರ ಅವ್ಯವಹಾರ ತನಿಖೆಗೆ ಆಗ್ರಹ

Karave Memorandum Photo
Published on

ಬೀದರ್: ಇಲ್ಲಿಯ ನಿರ್ಮಿತಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ವೇದಿಕೆ ಪದಾಧಿಕಾರಿಗಳು ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಪಾಟೀಲ ನೇತೃತ್ವದಲ್ಲಿ ನಗರದಲ್ಲಿ ನಿಯೋಗದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ರಾಜ್ಯದ ನಿರ್ಮಿತಿ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಜಂಟಿ ಸಹಿಯೊಂದಿಗೆ ಉಪ ವಿಭಾಗಾಧಿಕಾರಿ ಆರ್ಥಿಕ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಆದರೆ, ಬೀದರ್‍ನಲ್ಲಿ ನಿಯಮ ಗಾಳಿಗೆ ತೂರಲಾಗಿದೆ. ಉಪ ವಿಭಾಗಾಧಿಕಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರೂ, ಯೋಜನಾ ವ್ಯವಸ್ಥಾಪಕ ಓಂಕಾರ ಆರ್ಥಿಕ ವ್ಯವಹಾರ ನಿಭಾಯಿಸುತ್ತಿರುವುದು ಲೂಟಿಗೆ ದಾರಿಯಾಗಿದೆ ಎಂದು ದೂರಿದರು.
ಬಸವಕಲ್ಯಾಣ ಹಾಗೂ ಔರಾದ್‍ನ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ)ಗಳ ಕಟ್ಟಡ ಕಾಮಗಾರಿಯನ್ನು ಕಳಪೆ ಗುಣಮಟ್ಟದಿಂದ ಕೈಗೊಳ್ಳಲಾಗಿದೆ. ಈಗಾಗಲೇ ನೆಲಹಾಸು ಬಿರುಕು ಬಿಟ್ಟಿದೆ ಎಂದು ಆಪಾದಿಸಿದರು.
ಕೂಡಲೇ ನಿರ್ಮಿತಿ ಕೇಂದ್ರದ ಅವ್ಯವಹಾರದ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟದ ಮಾರ್ಗ ಅನುಸರಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಸುಧಾಕರ ರಾಠೋಡ್, ಕಾರ್ಯದರ್ಶಿ ಮಲ್ಲಿಕಾರ್ಜುನ, ಭಾಲ್ಕಿ ತಾಲ್ಲೂಕು ಘಟಕದ ಗೌರವಾಧ್ಯಕ್ಷ ರಮೇಶ ಚಿದ್ರಿ, ಯುವ ಘಟಕದ ಅಧ್ಯಕ್ಷ ಸುದೀಪ್ ತೂಗಾವೆ, ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಸಂಜು ಯಾದವ್, ಪ್ರಮುಖರಾದ ದಿಲೀಪ್ ದೊಡ್ಡಮನಿ, ಅಜೀಮ್ ಪಟೇಲ್ ನಿಯೋಗದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net