

ಸುಂಟಿಕೊಪ್ಪ: ಹಟ್ಟಿಹೊಳೆ ನಿರ್ಮಲಾ ವಿದ್ಯಾಭವನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಹಾಗೂ ಬಾಲಕಿಯರ ವಾಲಿಬಾಲ್‌ನಲ್ಲಿ ಪ್ರಥಮ, ಬಾಲಕಿಯರ ಥ್ರೋಬಾಲ್ ದ್ವಿತೀಯ, ಹಾಕಿಯಲ್ಲಿ ಬಾಲಕ ಹಾಗೂ ಬಾಲಕಿಯರು ಪ್ರಥಮ ಸ್ಥಾನ ಪಡೆದಿದ್ದಾರೆ. ಚಕ್ರಎಸೆತದಲ್ಲಿ ಎಸ್.ಕೆ. ನಿತಿನ್‌ಕುಮಾರ್ ಪ್ರಥಮ, ಶಾಟ್‌ಪಟ್‌ನಲ್ಲಿ ನಿತಿನ್‌ಕುಮಾರ್ ಹಾಗೂ ದಾಕ್ಷಾಯಿಣಿ ಪ್ರಥಮ, ಓಟದ ಸ್ಪರ್ಧೆಯಲ್ಲಿ ಅಕ್ಷಯ್ ಎಸ್.ಪಿ 800 ಮೀ. ಮತ್ತು 1500 ಮೀ.ನಲ್ಲಿ ದ್ವಿತೀಯ, 200 ಮೀ.ನಲ್ಲಿ ಪ್ರಥಮ ಮತ್ತು ಪ್ರಯಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಆಲೂರು- ಸಿದ್ದಾಪುರದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ, ಬಾಲಕಿಯರ ಹಾಕಿ ಪ್ರಥಮ, ಬಾಲಕ ಹಾಗೂ ಬಾಲಕಿಯರ ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಮತ್ತು ಎಸ್.ಕೆ.ನಿತಿನ್‌ಕುಮಾರ್ ಚಕ್ರಎಸೆತದಲ್ಲಿ ಪ್ರಥಮ ಹಾಗೂ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಕ್ರೀಡೆಯಲ್ಲಿ ಸಾಧನೆ ತೋರಿದ ಶಾಲಾ ಕ್ರೀಡಾ ಮಕ್ಕಳನ್ನು ಶಾಲೆಯ ವ್ಯವಸ್ಥಾಪಕ ರೆವೆರೆಂಡ್ ಫಾದರ್ ಗಿಲ್ಬರ್ಟ್ ಡಿಸಿಲ್ವ, ಮುಖ್ಯಶಿಕ್ಷಕ ರೀನಾ, ದೈಹಿಕ ಶಿಕ್ಷಣ ಶಿಕ್ಷಕ ಮಹಮದ್ ಸಲೀಂ, ಸಹ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರು ಅಭಿನಂದಿಸಿದರು.